ಬೀಜಿಂಗ್, ಫೆ. 20 (DaijiworldNews/HR): ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಚೀನಾ ಇದೀಗ ಸಂಘರ್ಷಕ್ಕೆ ಸಂಬಂಧಪಟ್ಟಂತೆ ವಿಡಿಯೋವನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಈ ಕುರಿತು ಚೀನಾದ ಸ್ಟೇಟ್ ಮೀಡಿಯಾ ಟ್ವೀಟ್ ಮಾಡಿದ್ದು, ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರ ವಿರುದ್ಧ ನಡೆದ ಸಂಘರ್ಷದ ದೃಶ್ಯಗಳನ್ನು ಬಿಡುಗಡೆ ಮಾಡಿದ್ದು, "ಭಾರತೀಯ ಪಡೆ ಚೀನಾ ನೆಲೆಗೆ ಅತಿಕ್ರಮಿಸಿದೆ" ಎಂದು ಆರೋಪಿಸಿದೆ.
ಇನ್ನು ವಿಡಿಯೋದಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ಪಡೆ ಕೊರೆಯುವ ಚಳಿಯಲ್ಲೂ ನದಿಯನ್ನು ದಾಟಿ ಕಲ್ಲಿನ ದಂಡೆಯಲ್ಲಿ ಸಂಘರ್ಷಕ್ಕಿಳಿದಿದ್ದು, ಬಳಿಕ ಹಿಂದಕ್ಕೆ ಚದುರಿಸಲು ಒಬ್ಬರನ್ನೊಬ್ಬರು ತಳ್ಳುತ್ತಿರುವುದು ಕಾಣುತ್ತದೆ.