ಪ್ಲೋರಿಡಾ, ಫೆ.21 (DaijiworldNews/MB) : ಕೊರೊನಾ ಲಸಿಕೆ ಪಡೆಯಲು ಕೆಲವರು ಹಿಂಜರಿಯುತ್ತಿದ್ದು ಇನ್ನೂ ಕೆಲವರು ನನಗೆ ಕೊರೊನಾ ಲಸಿಕೆ ದೊರೆತರೆ ಸಾಕಪ್ಪ ಎಂದುಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮಹಿಳೆಯರಿಬ್ಬರು ಕೊರೊನಾ ಲಸಿಕಾ ಕೇಂದ್ರಕ್ಕೆ ತಾವು ಹಿರಿಯ ನಾಗರಿಕರು ಎಂಬಂತೆ ಬಿಂಬಿಸುವ ವೇಷ ಧರಿಸಿಕೊಂಡು ಬಂದ ಘಟನೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
ಇಬ್ಬರು ಮಹಿಳೆಯರು ಗ್ಲೌವ್ಸ್ಗಳು, ಕನ್ನಡಕ ಹಾಗೂ ಬಾನೆಟ್ಗಳನ್ನು ಧರಿಸಿ ಇಲ್ಲಿನ ಆರೆಂಜ್ ಕೌಂಟಿಯ ಲಸಿಕಾ ಕೇಂದ್ರಕ್ಕೆ ತೆರಳಿದ್ದು ಲಸಿಕೆ ಪಡೆಯಲು ಮುಂದಾಗಿದ್ದರು. ಇಬ್ಬರಿಗೂ 34 ಹಾಗೂ 44 ವರ್ಷ ವಯಸ್ಸಾಗಿದ್ದು, ಅವರು ಲಸಿಕೆ ಪಡೆಯಲು ಅನರ್ಹರಾಗಿದ್ದರು. ಮಹಿಳೆಯರಿಬ್ಬರೂ ಮೊದಲನೇ ಡೋಸ್ನ ಲಸಿಕೆ ಪಡೆದಿದ್ದು, ಎರಡನೇ ಡೋಸ್ನ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂದಾಗ ಸಿಕ್ಕಿ ಹಾಕಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ. ರೌಲ್ ಪಿನೋ ಅವರು, ''ಈ ಮಹಿಳೆಯರಿಬ್ಬರು ಎರಡನೇ ಡೋಸ್ ಲಸಿಕೆ ಪಡೆಯುವಾಗ ಸಿಕ್ಕಿ ಹಾಕಿಕೊಂಡರು. ಆದರೆ ಇವರಿಬ್ಬರು ಮೊದಲ ಡೋಸ್ ಹೇಗೆ ಪಡೆದರು ಎಂದು ತಿಳಿಯುತ್ತಿಲ್ಲ. ಅವರಲ್ಲಿ ಮಾನ್ಯವಾದ ಸಿಡಿಸಿ ಕಾರ್ಡ್, ವ್ಯಾಕ್ಸಿನೇಷನ್ ಕಾರ್ಡ್ ಇತ್ತು. ಆದರೆ ಅವರ ಐಡಿಗಳು ಮತ್ತು ಡ್ರೈವಿಂಗ್ ಲಸೆನ್ಸ್ನಲ್ಲಿ ಕೆಲವು ಸಮಸ್ಯೆಗಳಿದ್ದವು. ಲಸಿಕೆ ಹಾಕುವವರು, ಈ ಇಬ್ಬರು ಮಹಿಳೆಯರು, ಅಸಹಜವಾಗಿ ಕಂಡ ಹಿನ್ನೆಲೆಯಲ್ಲಿ ಪೊಲೀಸರನ್ನು ಒಳಗೆ ಕರೆದರು'' ಎಂದು ಹೇಳಿದರು.
ಇನ್ನು ಈ ಮಹಿಳೆಯರ ಈ ಕೃತ್ಯದಿಂದ ಆಕ್ರೋಶಕೊಳಗಾದ ಅಧಿಕಾರಿಗಳು ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನೀವು ಏನು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ನಿಮಗಿಂತ ಹೆಚ್ಚು ಅಗತ್ಯವಿರುವವರಿಂದ ನೀವು ಲಸಿಕೆಯನ್ನು ಕಸಿದಿದ್ದೀರಿ" ಎಂದು ಅಧಿಕಾರಿಗಳು ಹೇಳಿದ್ದಾರೆ.