ವಾಷಿಂಗ್ಟನ್, ಫೆ.21 (DaijiworldNews/PY): ವಿಮಾನದ ಇಂಜಿಲ್ ಪೇಲ್ ಆಗಿ ಬಿಡಿ ಭಾಗಗಳನ್ನು ಬೀಳಿಸಿಕೊಂಡು ಹೋಗಿದ್ದ ಅಮೇರಿಕಾದ ಯುನೈಟೆಡ್ ಏರ್ಲೈನ್ಸ್ನ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
"ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೋಯಿಂಗ್ 777-200 ಯುಎ328 ಸಂಖ್ಯೆಯ ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ 12.15 ವೇಳೆಗೆ ಪ್ರಯಾಣ ಬೆಳೆಸಿತ್ತು" ಎಂದು ವಿಮಾನ ನಿಲ್ದಾಣದ ವಕ್ತರಾ ಅಲೆಕ್ಸ್ ರೆಂಟೇರಿಯಾ ತಿಳಿಸಿದ್ದಾರೆ.
ವಿಮಾನದ ಎಂಜಿನ್ ಮಾರ್ಗ ಮಧ್ಯೆ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಹಾರಾಟ ನಡೆಸುತ್ತಿದ್ದ ಸಂದರ್ಭ ಎಂಜಿನ್ನ ರಕ್ಷಣಾ ಕವಚ ಕಳಚಿ ಬಿದ್ದಿದೆ. ಆದರೂ ಕೂಡಾ ಯಾವುದೇ ಅಪಾಯವಾಗದೇ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪೈಲಟ್ನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದುರಂತ ತಪ್ಪಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯುನೈಟೆಡ್ ಏರ್ಲೈನ್ಸ್, "ಎಂಜಿನ್ ಹಾನಿಯಾದ ಹಿನ್ನೆಲೆ ವಿಮಾನ ಪುನಃ ಡೆನ್ವರ್ಗೆ ಹಿಂದಿರುಗಿತು. ವಿಮಾನದಲ್ಲಿದ್ದ 241 ಮಂದಿ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ" ಎಂದು ತಿಳಿಸಿದೆ.
"ವಿಮಾನ ಟೇಕ್ಆಫ್ ಆದ ಸ್ವಲ್ಪ ಸಮಯದಲ್ಲೇ ಬಲ ಎಂಜಿನ್ ವೈಫಲ್ಯ ಅನುಭವಿಸಿತು. ವಿಮಾನ ಹಾರಾಟ ನಡೆಸುತ್ತಿರುವ ಸಂದರ್ಭದಲ್ಲೇ ಬಿಡಿಭಾಗಗಳನ್ನು ಬೀಳಿಸುತ್ತಾ ಹೋಯಿತು ಎನ್ನುವ ವರದಿಗಳು ನಮ್ಮ ಗಮನಕ್ಕೆ ಬಂದಿವೆ" ಎಂದು ಅಮೇರಿಕಾದ ವಾಯುಯಾನ ಇಲಾಖೆ ಹೇಳಿದೆ.
ಘಟನೆಯ ಬಗ್ಗೆ ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಅನುಭವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, "ಈ ಸಂದರ್ಭ ನಾವು ನಿಜವಾಗಿ ಬದುಕಿ ಬರುತ್ತೇವೆ ಎನ್ನುವ ಆಸೆ ಇರಲಿಲ್ಲ. ನಾವು ತುಂಬ ಆತಂಕಕ್ಕೊಳಗಾಗಿದ್ದೆವು. ವಿಮಾನ ಎತ್ತರದಿಂದ ಏಕಾಏಕಿ ಕುಸಿಯಲು ಆರಂಭಿಸಿತು" ಎಂದು ಎಂದು ಫ್ಲೋರಿಡಾದ ಫೋರ್ಟ್ ಲಾಡೆರ್ಡೇಲ್ನ ಪ್ರಯಾಣಿಕ ಡೇವಿಡ್ ಡೆಲುಸಿಯಾ ಡೆನ್ವರ್ ತಿಳಿಸಿದ್ದಾರೆ.