ವಾಷಿಂಗ್ಟನ್, ಫೆ.24 (DaijiworldNews/PY): ಭಾರತದ ಜೊತೆಗೆ ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಅಮೇರಿಕಾದಲ್ಲಿ ಜೋ ಬಿಡೆನ್ ನೇತೃತ್ವದ ಸರ್ಕಾರ ಎದುರು ನೋಡುತ್ತಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮೇರಿಕಾದ ವಿದೇಶಾಂಗ ವ್ಯವಹಾರಗಳ ವಕ್ತಾರ ನೆಡ್ ಪ್ರೈಸ್ ಅವರು, "ಉಭಯ ದೇಶಗಳ ನಡುವೆ ಆರೋಗ್ಯ ಸಹಕಾರವನ್ನು ಹೆಚ್ಚಿಸಲು ನಾವು ಒಪ್ಪಂದಕ್ಕಾಗಿ ಎದುರು ನೋಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ರೋಗವನ್ನು ಎದುರಿಸಲು, ಲಸಿಕೆಗಳನ್ನು ಅಭಿವೃದ್ದಿಪಡಿಸುವಲ್ಲಿ ಹಾಗೂ ಈ ಸಮಯದಲ್ಲಿ ನಿರ್ಣಾಯಕ ಔಷಧಿಗಳನ್ನು ಅಭಿವೃದ್ದಿಪಡಿಸುವ ಮಹತ್ವವನ್ನು ಗುರುತಿಸಲು ಹಾಗೂ ಅವುಗಳನ್ನು ಜಾಗತಿಕವಾಗಿ ಲಭ್ಯವಾಗುವಂತೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ.
"ಉಭಯ ದೇಶಗಳ ನಡುವಿನ ಸಹಕಾರವು ಆರೋಗ್ಯ ಹಾಗೂ ಔಷಧಿಗಳ ಸಂಶೋಧನೆಯಲ್ಲಿ ದಶಕಗಳ ಯಶಸ್ವಿ ಸಹಭಾಗಿತ್ವವನ್ನು ನಿರ್ಮಿಸುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
"ಭಾರತದ ಔಷಧೀಯ ವಲಯವು ಪ್ರಬಲವಾಗಿದ್ದು, ಸುಸ್ಥಾಪಿತವಾಗಿದೆ. ಇದು ಜಾಗತಿಕವಾಗಿ ಜೀವ ರಕ್ಷಕ ಲಸಿಕೆಗಳ ತಯಾರಿಕೆಗೆ ಅನೇಕ ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸಿದೆ. ಕೊರೊನಾ ಸಾಂಕ್ರಾಮಿಕದ ಆರಂಭದಿಂದಲೂ ಅಮೇರಿಕಾದ ಔಷಧೀಯ ಉದ್ಯಮವು ಭಾರತೀಯ ಕಂಪೆನಿಗಳೊಂದಿಗೆ ಸಮನ್ವಯ ಸಾಧಿಸಿರುವುದಕ್ಕೆ ಸಂತೋಷವಿದೆ" ಎಂದು ತಿಳಿಸಿದ್ದಾರೆ.