ವಾಷಿಂಗ್ಟನ್, ಫೆ.24 (DaijiworldNews/PY): "ನೀರಾ ಟಂಡನ್ ಅವರು ಅಮೇರಿಕಾದ ಬಜೆಟ್ ಅನ್ನು ಸಿದ್ದಪಡಿಸಲು ಸಮರ್ಥರಾದ ಏಕೈಕ ವ್ಯಕ್ತಿ" ಎಂದು ಶ್ವೇತಭವನದ ಸಿಬ್ಬಂದಿ ಬಣ್ಣಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು, "ಬಜೆಟ್ ವಿಭಾಗವನ್ನು ಮುನ್ನಡೆಸಲು ಇರುವ ಏಕೈಕ ಅಭ್ಯರ್ಥಿ ಎಂದರೆ ಅದು ನೀರಾ ಟಂಡನ್" ಎಂದಿದ್ದಾರೆ.
ನೀರಾ ಅವರ ನಾಮನಿರ್ದೇಶನವನ್ನು ಸೆನೆಟ್ ದೃಢಪಡಿಸಬೇಕಿದೆ. ಇನ್ನೊಂದೆಡೆ ನೀರಾ ಅವರ ನಾಮನಿರ್ದೇಶನಕ್ಕೆ ಹಲವು ರಿಪಬ್ಲಿಕನ್ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.
ನೀರಾ ಟಂಡನ್ ಅವರ ನಾಮನಿರ್ದೇಶನವನ್ನು ಅನುಮೋದಿಸುವ ನಿರ್ಣಯದ ವಿರುದ್ದ ನಾನು ಮತ ಚಲಾಯಿಸುವೆ ಎಂದು ಒಹಿಯೊ ಪ್ರತಿನಿಧಿಸುವ ರಿಪಬ್ಲಿಕನ್ ಸಂಸದ ರಾಬ್ ಪೋರ್ಟ್ಮನ್ ಘೋಷಿಸಿದರು. ನೀರಾ ಅವರ ನಾಮನಿರ್ದೇಶನವನ್ನು ವಿರೋಧಿಸುವುದಾಗಿ ಡೆಮಾಕ್ರಟಿಕ್ ಸಂಸದ ಜೋ ಮನ್ಚಿನ್ ಕೂಡಾ ತಿಳಿಸಿದ್ದಾರೆ.
ಸೆನೆಟ್ನಲ್ಲಿ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ತಲಾ 50 ಸದಸ್ಯರಿದ್ದು, ಡೆಮಾಕ್ರಟಿಕ್ ಸಂಸದ ಸಂಸದ ಮನ್ಚಿನ್ ಅವರ ಹೇಳಿಕೆ ಕಾರಣದಿಂದ ನೀರಾ ಟಂಡನ್ ಅವರ ನಾಮನಿರ್ದೇಶನದ ಅನುಮೋದನೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, "ನೀರಾ ಟಂಡನ್ ಅವರ ನಾಮನಿರ್ದೇಶನಕ್ಕೆ ಅನುಮೋದನೆ ದೊರಕುವ ಭರವಸೆ ಇದೆ" ಎಂದು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ.