ವಾಷಿಂಗ್ಟನ್, ಫೆ.26 (DaijiworldNews/HR): ಅಮೇರಿಕಾದ ಸೇನಾ ನೆಲೆ ಮೇಲೆ ಇತ್ತೀಚೆಗೆ ಇರಾಕ್ನಲ್ಲಿ ನಡೆದಿದ್ದ ರಾಕೆಟ್ ದಾಳಿಗೆ ಪ್ರತೀಕಾರವಾಗಿ ಅಮೇರಿಕಾ ಮಿಲಿಟರಿಯು ಪೂರ್ವ ಸಿರಿಯಾದಲ್ಲಿನ ಇರಾನ್ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ ನಿರ್ದೇಶನದ ಮೇರೆಗೆ ಅಮೇರಿಕಾ ಮಿಲಿಟರಿ ಪಡೆಗಳು ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವಕ್ತಾರ ಜಾನ್ ಕಿರ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು "ಇರಾಕ್ನಲ್ಲಿ ಇತ್ತೀಚಿಗೆ ಅಮೇರಿಕಾ ಮತ್ತು ಒಕ್ಕೂಟದ ಮಿಲಿಟರಿ ವಿರುದ್ಧದ ದಾಳಿಗೆ ಪ್ರತಿಯಾಗಿ ಮತ್ತು ಉಗ್ರರಿಂದ ದಾಳಿ ಆತಂಕದ ಹಿನ್ನೆಲೆಯಲ್ಲಿ ಈ ದಾಳಿಗೆ ಆದೇಶ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.
ಗುರುವಾರ ನಡೆದ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದೆಯೇ ಎಂಬ ಬಗ್ಗೆ ಅಮೇರಿಕಾ ಮಿಲಿಟರಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ.