ಇಸ್ಲಾಮಾಬಾದ್, ಫೆ.27 (DaijiworldNews/PY): "ಭಾರತವು, ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಬೇಕು" ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಪಾಲನೆಯನ್ನು ನಾನು ಸ್ವಾಗತಿಸುತ್ತೇನೆ. ಮುಂದಿನ ಪ್ರಗತಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿ ಮಾಡುವ ಜವಾಬ್ದಾರಿ ಭಾರತ ತೆಗೆದುಕೊಳ್ಳಬೇಕಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಲ್ಲೇಖ ಮಾಡಿರುವ ಕಾಶ್ಮೀರಿ ಜನರ ಸ್ವ-ನಿರ್ಣಯದ ಹಕ್ಕು ಹಾಗೂ ದೀರ್ಘಾಕಾಲದ ಬೇಡಿಕೆಯನ್ನು ಪೂರೈಸುವ ಅಗತ್ಯವಾದ ಕ್ರಮಗಳನ್ನು ಭಾರತ ತೆಗೆದುಕೊಳ್ಳಬೇಕು" ಎಂದಿದ್ದಾರೆ.
"ವಶಪಡಿಸಿಕೊಂಡಿದ್ದ ಭಾರತೀಯ ಪೈಲಟ್ ಅನ್ನು ಹಿಂದಿರುಗಿಸುವ ಮೂಲಕ ಭಾರತೀಯ ಸೇನೆಯ ಅಪಾಯಕಾರಿ ನೀತಿಯ ವಿರುದ್ದ ನಾನು ಪಾಕಿಸ್ತಾನದ ಜವಾಬ್ದಾರಿಯುತ ನಡವಳಿಕೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ. ಎಂದಿಗೂ ಕೂಡಾ ನಾವು ಶಾಂತಿಯ ಪರವಾಗಿದ್ದು, ಮಾತುಕತೆಯ ಮುಖೇನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ದರಾಗಿದ್ದೇವೆ" ಎಂದು ತಿಳಿಸಿದ್ದಾರೆ.
ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ, ಕದನ ವಿರಾಮ ನಿಯಮಗಳ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ವಿಚಾರದ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿ ಬಂದಿದ್ದು, ನಂತರ ಗುರುವಾರ ಜಂಟಿ ಪ್ರಕಟಣೆ ಬಿಡುಗಡೆಗೊಳಿಸಲಾಗಿತ್ತು.