ಇಸ್ಲಾಮಾಬಾದ್, ಮಾ.04 (DaijiworldNews/PY): ಹಣಕಾಸು ಸಚಿವ ಚುನಾವಣೆಯಲ್ಲಿ ಸೋಲು ಕಂಡಿರುವ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ ವಿಶ್ವಾಸ ಮತಯಾಚಿಸಲು ತೀರ್ಮಾನ ಮಾಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಆಪ್ತ ಹಾಗೂ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್, ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಯುಸೂಫ್ ಗಿಲಾನಿ ಎದುರು ಬುಧವಾರ ಸೋಲನುಭವಿಸಿದ್ದರು.
ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ನ ಅಭ್ಯರ್ಥಿಯಾಗಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಹಿರಿಯ ಮುಖಂಡ ಗಿಲಾನಿ ಅವರು ಕಣಕ್ಕಿಳಿದಿದ್ದರು.
ಸಂಸತ್ ಚುನಾವಣೆಯಲ್ಲಿ ಗಿಲಾನಿ ಅವರ ಗೆಲುವು ಕಾಣುತ್ತಿದ್ದಂತೆ ವಿರೋಧ ಪಕ್ಷದ ಮುಖಂಡರು ಇಮ್ರಾನ್ ಖಾನ್ ವಿರುದ್ದ ಟೀಕೆ ವ್ಯಕ್ತಪಡಿಸಿದ್ದು, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಫಲಿತಾಂಶ ಘೋಷಣೆಯಾದ ಬಳಿಕ ಮಾತನಾಡಿದ ವಿದೇಶಾಂಗ ಸಚಿವ ಶಾಹ್ ಮಹಮ್ಮೂದ್ ಖುರೇಶಿ, "ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಾಸ ಮತ ಯಾಚಿಸಲು ತೀರ್ಮಾನ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
"ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ರಾಜೀನಾಮೆ ಸಲ್ಲಿಸಬೇಕು. ಈ ಬೇಡಿಕೆ ಕೇವಲ ವಿರೋಧ ಪಕ್ಷಗಳದ್ದಲ್ಲ, ಆಡಳಿತ ಪಕ್ಷದವರೂ ಕೂಡಾ ಇದ್ದನ್ನೇ ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಜಾಪ್ರಭುತ್ವದ ಹಾದಿಯಲ್ಲಿ ನೂತನವಾದ ಮನ್ವಂತರ ಪ್ರಾರಂಭವಾಗಿದೆ" ಎಂದು ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೊ-ಜರ್ದಾರಿ ಹೇಳಿದ್ದಾರೆ.