ಯಾಂಗೋನ್, ಮಾ.04 (DaijiworldNews/HR): ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆಯಲು ಸೇನಾಡಳಿತ ಭದ್ರತಾ ಪಡೆಗಳ ಮೂಲಕ ಅಶ್ರುವಾಯು, ರಬ್ಬರ್ ಬುಲೆಟ್, ಗುಂಡಿನ ದಾಳಿ ನಡೆಸುತ್ತಿದ್ದು, 38 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಮಿಲಿಟರಿ ಕ್ಷಿಪ್ರ ದಂಗೆ ವಿರೋಧಿಸಿ ದೇಶದಾದ್ಯಂತ ನಾಗರಿಕರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಮ್ಯಾನ್ಮಾರ್ನಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎನ್ನುವುದು ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ ಬುಧವಾರ 38 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಅನೇಕ ನಗರಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಜನರನ್ನು ಚದುರಿಸಲು ಭದ್ರತಾ ಪಡೆಗಳು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದು, ಪತ್ರಕರ್ತರು ಸೇರಿದಂತೆ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.