ಅಂಕಾರಾ, ಮಾ.05 (DaijiworldNews/PY): "ಟರ್ಕಿಯ ಪೂರ್ವ ಭಾಗದಲ್ಲಿ ಸೇನಾ ಹೆಲಿಕಾಫ್ಟರ್ ಪತನವಾಗಿದ್ದು, 11 ಮಂದಿ ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ" ಎಂದು ರಕ್ಷಣಾ ಸಚಿವಾಲಯ ಹೇಳಿದೆ.
"ಕರಾವಳಿ ಪ್ರದೇಶಗಳಲ್ಲಿ ಬಳಕೆಯಾಗುವ ಕೂಗರ್ ರೀತಿಯ ಹೆಲಿಕಾಫ್ಟರ್ ತತ್ವಾನ್ ಪಟ್ಟಣ ಬಳಿ ಪತನಗೊಂಡಿದ್ದು, ಕರ್ಡಿಶ್ ಮಂದಿ ಹೆಚ್ಚಿರುವ ಬಿಟ್ಲಿಸ್ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ. ಹೆಲಿಕಾಫ್ಟರ್ ಬಿಂಗಾಲ್ ಪ್ರದೇಶದಿಂದ ಹಾರಾಟ ಪ್ರಾರಂಭಿಸಿದ್ದು, ಮಧ್ಯಾಹ್ನ 2.25ರ ಸುಮಾರಿಗೆ ಸಂಪರ್ಕ ಕಡಿದುಕೊಂಡಿತ್ತು" ಎಂದು ಸಚಿವಾಲಯ ತಿಳಿಸಿದೆ.
ಹೆಲಿಕಾಫ್ಟರ್ ಪತನವಾದ ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಸೇನೆಯ ಲೆಫ್ಟಿನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಕೂಡಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಯೋರ್ವರು ಹೇಳಿದ್ದಾರೆ.
ಹಿಮ ಹಾಗೂ ಮಂಜು ಸೇರಿದಂತೆ ಹವಾಮಾನ ವೈಪರೀತ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಯ ಬಗ್ಗೆ ತಕ್ಷಣಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದು, ಗಾಯಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಹಿಮದ ರಾಶಿಯಿಂದ ಮೇಲಕ್ಕೆತ್ತಿದ್ದಾರೆ. ಅಪಘಾತ ಸ್ಥಳಕ್ಕೆ ಟರ್ಕಿಯ ರಕ್ಷಣಾಸಚಿವ ಹುಲುಸಿ ಆಕರ್ ಹಾಗೂ ಸೇನಾ ಮುಖ್ಯಸ್ಥ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.