ವೆಲ್ಲಿಂಗ್ಟನ್, ಮಾ.05 (DaijiworldNews/MB): ದಕ್ಷಿಣ ಪೆಸಿಫಿಕ್ನಲ್ಲಿ ಶುಕ್ರವಾರ ಬೆಳಗ್ಗೆ ಸರಣಿ ಭೀಕರ ಭೂ ಕಂಪನವಾಗಿದ್ದು ಸುನಾಮಿ ಅಪ್ಪಳಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನೆ ಕಾರ್ಯ ಕೂಡಾ ಮಾಡಲಾಗಿದ್ದು ಸದ್ಯ ಸುನಾಮಿ ಭೀತಿ ದೂರವಾಗಿದೆ.
ಮೊದಲು ನ್ಯೂಜಿಲೆಂಡ್ಗೆ ಬಹಳ ಹತ್ತಿರವಾಗಿ 7.4 ತೀವ್ರತೆಯ, ಬಳಿಕ ಮತ್ತೆ 7.4 ತೀವ್ರತೆಯ ಭೂಕಂಪನ ಮೊದಲು ಆಗಿದ್ದು ಮೂರನೇ ಬಾರಿಗೆ ನ್ಯೂಜಿಲೆಂಡ್ನಿಂದ 1,000 ಕಿ.ಮೀ. ದೂರದ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 8.1 ತೀವ್ರತೆಯ ಭೂಕಂಪನವಾಗಿತ್ತು. ಈ ಹಿನ್ನೆಲೆ ಸುನಾಮಿಯ ಎಚ್ಚರಿಕೆಯನ್ನೂ ನೀಡಲಾಗಿತ್ತು. ಈ ಎಚ್ಚರಿಕೆ ನೀಡುತ್ತಿದ್ದಂತೆಯೇ ವಾಹನ ದಟ್ಟಣೆ ಆರಂಭವಾಗಿ ಗೊಂದಲಕ್ಕೆ ಕಾರಣವಾಗಿತ್ತು. ಜನರು ಆತಂಕಕ್ಕೆ ಒಳಗಾಗಿ ಸುರಕ್ಷಿತ ಸ್ಥಳಕ್ಕೆ ಹೋಗಲು ಪರದಾಡುವಂತಾಗಿತ್ತು.
ಇದೀಗ ಕೆಲವು ಪ್ರದೇಶಗಳಲ್ಲಿ ಸಣ್ಣ ಮಟ್ಟದ ಸುನಾಮಿ ಅಲೆಗಳು ಎದ್ದಿದ್ದು ಅಲ್ಪ ಪ್ರಮಾಣದ ಹಾನಿಯುಂಟಾಗಿದೆ. ಗಿಸ್ಬೋರ್ನ್ ಬಳಿಯ ಟೊಕೊಮರು ಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಎದ್ದಿವೆ.
ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯು ಸುನಾಮಿ ಭೀತಿ ದೂರವಾಗಿದ್ದು ಜನರು ತಮ್ಮ ನಿವಾಸಗಳಿಗೆ ವಾಪಾಸ್ ತೆರಳಲು ತಿಳಿಸಿದ್ದು, ಆದರೆ ಕಡಲ ತೀರಕ್ಕೆ ಹೋಗಬಾರದೆಂದು ಸೂಚನೆ ನೀಡಿದೆ.
2011ರಲ್ಲಿ ಕ್ರೈಸ್ಟ್ಚರ್ಚ್ನಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು 185 ಮಂದಿ ಸಾವನ್ನಪ್ಪಿ ಅಪಾರ ಆಸ್ತಿ ಪಾಸ್ತಿ ಹಾನಿ ಉಂಟಾಗಿತ್ತು.