ಈಕ್ವೆಟೋರಿಯಲ್, ಮಾ 08 (DaijiworldNews/MS): ಈಕ್ವೆಟೋರಿಯಲ್ ಗಿನಿಯಾದ ಬಾಟಾ ನಗರದ ಮಿಲಿಟರಿ ಬ್ಯಾರಕ್ಗಳ ಬಳಿಯನಲ್ಲಿ ಭಾನುವಾರ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಸಚಿವಾಲಯ ತಿಳಿಸಿದ್ದಾರೆ.
ಬಾಟಾದ ಮೊಂಡೊಂಗ್ ನ್ಕುವಾಂಟೋಮಾ ದ ಮಿಲಿಟರಿ ಬ್ಯಾರಕ್ ಗಳಲ್ಲಿ 'ಡೈನಮೈಟ್ ನಿರ್ವಹಣೆ'ಯಲ್ಲಿ 'ನಿರ್ಲಕ್ಷ್ಯ' ಮಾಡಿದ ಕಾರಣ ಸ್ಫೋಟ ಉಂಟಾಗಿದೆ ಎಂದು ಅಧ್ಯಕ್ಷ ಟಿಯೋಡೊರೊ ಒಬಿಯಾಂಗ್ ನುಗ್ಯುಮಾ ಹೇಳಿದ್ದಾರೆ.
'ಸ್ಫೋಟದ ಪರಿಣಾಮ ಬಾಟಾದ ಬಹುತೇಕ ಎಲ್ಲ ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯುಂಟಾಗಿದೆ' ಎಂದು ಅಧ್ಯಕ್ಷರು ದೂರದರ್ಶನಕ್ಕೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಟಿವಿ ಚಾನೆಲ್ ನ ವಿಡಿಯೋ ಒಂದರಲ್ಲಿ , ಜನರು ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕುತ್ತಿರುವುದು ಹಾಗೂ ಕುಸಿದ ಕಟ್ಟಡಗಳಿಂದ ಭಗ್ನಾವಶೇಷಗಳನ್ನು ಎತ್ತುವುದನ್ನು ಕಾಣಬಹುದಾಗಿದೆ
ರಕ್ಷಣಾ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ, ಬ್ಯಾರಕ್ ನ ಶಸ್ತ್ರಾಸ್ತ್ರ ಗಳ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳ ಸ್ಫೋಟಕ್ಕೆ ಕಾರಣ ಎಂದು ಹೇಳಿದೆ. ಈ ಮೊದಲು ಆರೋಗ್ಯ ಸಚಿವಾಲಯ 17 ಮಂದಿ ಮೃತಪಟ್ಟಿರುವುದಾಗಿ ಟ್ವೀಟ್ ಮಾಡಿತ್ತು. ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಮೂರು ಆಸ್ಪತ್ರೆಗಳಲ್ಲಿ ಒಂದಾದ ಡಿ ಬಾಟಾ ಪ್ರಾದೇಶಿಕ ಆಸ್ಪತ್ರೆಗೆ ರಕ್ತದಾನಿಗಳು ಮತ್ತು ಸ್ವಯಂ ಸೇವಕ ಆರೋಗ್ಯ ಕಾರ್ಯಕರ್ತರು ತೆರಳುವಂತೆ ಸಚಿವಾಲಯ ಕರೆ ನೀಡಿದೆ.