ಮ್ಯಾನ್ಮಾರ್, ಮಾ10 (DaijiworldNews/MS): ಮಿಲಿಟರಿ ಧಂಗೆ ಮತ್ತು ಅಧ್ಯಕ್ಷ ಆಂಗ್ ಸಾನ್ ಸೂ-ಕಿ ಬಂಧನಕ್ಕೆ ಪ್ರತಿಭಟಿಸಲು ಮ್ಯಾನ್ಮಾರ್ನಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದು, ಈ ಸಂದರ್ಭ ಪೊಲೀಸ್ ಗುಂಡಿನ ದಾಳಿಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದು, ಆದರೂ ಇದ್ಯಾವುದನ್ನು ಲೆಕ್ಕಿಸಿದೆ ಪ್ರಜಾಪ್ರಭುತ್ವ ಪರ ಹೋರಾಟ ಮುಂದುವರಿದಿದೆ. ಮಿಲಿಟರಿ ದೇಶದಾದ್ಯಂತ ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಅತ್ಯಂತ ಕ್ರೂರವಾಗಿ ಮಟ್ಟ ಹಾಕುತ್ತಿದೆ.
ಈ ಮಧ್ಯೆ ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಅಟ್ಟಾಡಿಸಿಕೊಂಡು ಬಂದ ಸೈನಿಕರ ಮುಂದೆ 45 ವರ್ಷ ಕ್ಯಾಥೋಲಿಕ್ ಸನ್ಯಾಸಿನಿಯೋರ್ವಳು ಮೊಣಕಾಲುಗಳ ಮೇಲೆ ಬಿದ್ದು ಪ್ರತಿಭಟನಾಕಾರರನ್ನು ಗುಂಡು ಹಾರಿಸುವುದನ್ನು ನಿಲ್ಲಿಸುವಂತೆ ಬೇಡಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸನ್ಯಾಸಿನಿಯ ಧೈರ್ಯ ಹಾಗೂ ಮಾನವೀಯ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಾಚಿನ್ ರಾಜ್ಯದ ಉತ್ತರ ಮ್ಯಾನ್ಮಾರ್ ಪಟ್ಟಣವಾದ ಮೈಟ್ಕೈನಾದಲ್ಲಿ ಈ ಘಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಕ್ಕಳು ಮತ್ತು ನಿವಾಸಿಗಳ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸುವಂತೆ ಸಿಸ್ಟರ್ ಆನ್ ರೋಸ್ ನು ತವಾಂಗ್ ಪೊಲೀಸ್ ಅಧಿಕಾರಿಗಳ ಮುಂದೆ ಮಂಡಿಯೂರಿ ಮನವಿ ಮಾಡಿದ್ದಾರೆ
ವೈರಲ್ ಆದ ವಿಡಿಯೋದಲ್ಲಿ ಕಪ್ಪು ಬಿಳುಪಿನ ನಿಲುವಂಗಿ ಧರಿಸಿದ್ದ ಸಿಸ್ಟರ್ ಆನ್ ರೋಸ್, " ನಾನು ಇಲ್ಲಿ ಯಾವುದೇ ತೊಂದರೆಗಳನ್ನು ನೋಡಲು ಬಯಸುವುದಿಲ್ಲ, ಮಕ್ಕಳನ್ನು ಶೂಟ್ ಮಾಡಬೇಡಿ , ಮಕ್ಕಳ ಬದಲು ನನ್ನ ಮೇಲೆ ಗುಂಡು ಹಾರಿಸಿ" ಎಂದು ಕೇಳಿಕೊಂಡಿದ್ದಾರೆ.
ತವಾಂಗ್ ನಡೆಯಿಂದ ಅಚ್ಚರಿಗೊಂಡ ಸೈನಿಕರು, ರಸ್ತೆಯಲ್ಲೇ ತಾವೂ ಮಂಡಿಯೂರಿ ಕುಳಿತು ತವಾಂಗ್ ಅವರಿಗೆ ಕೈಮುಗಿದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.