ಪ್ಯಾರಿಸ್, ಮಾ.10 (DaijiworldNews/MB): ಇಡೀ ಫ್ರಾನ್ಸ್ ದೇಶ ಮಾತ್ರವಲ್ಲದೆ ವಿಶ್ವದ ಇತರೆ ದೇಶಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಇತಿಹಾಸ ಶಿಕ್ಷಕ ಸ್ಯಾಮುವೆಲ್ ಪ್ಯಾಟಿಯ ಶಿರಚ್ಛೇಧನ ಪ್ರಕರಣವು ಈಗ ತಿರುವು ಪಡೆದುಕೊಂಡಿದೆ. ಶಿಕ್ಷಕ ಪಾಠ ಮಾಡುವ ಸಂದರ್ಭ ಪ್ರವಾದಿ ಮೊಹಮ್ಮದ್ನ ವ್ಯಂಗ್ಯಚಿತ್ರ ತೋರಿಸಿದ್ದ ಎಂದು 13 ವರ್ಷದ ವಿದ್ಯಾರ್ಥಿನಿ ಹೇಳಿದ್ದ ಸುಳ್ಳಿನಿಂದಲೇ ಈ ಬಹು ದೊಡ್ಡ ಅನಾಹುತ ನಡೆದಿದೆ ಎಂದು ತಿಳಿದು ಬಂದಿದೆ.
ಶಾಲೆಯಿಂದ ಬಂದ 13 ವರ್ಷದ ವಿದ್ಯಾರ್ಥಿನಿ ತನ್ನ ತಂದೆಯ ಬಳಿ, ಇಂದು ಇತಿಹಾಸ ಶಿಕ್ಷಕ ಸ್ಯಾಮುವೆಲ್ ಪ್ಯಾಟಿ ಪಾಠ ಮಾಡುವ ವೇಳೆ ಪ್ರವಾದಿ ಮೊಹಮ್ಮದ್ನ ವ್ಯಂಗ್ಯಚಿತ್ರ ತೋರಿಸಿ ವಿವರಿಸಿದ್ದ, ಅಲ್ಲದೆ ಮುಸ್ಲಿಂ ವಿದ್ಯಾರ್ಥಿಗಳನ್ನು ಹೊರ ಹೋಗಲು ಹೇಳಿದ ಎಂದು ತಿಳಿಸಿದ್ದಳು. ಇದರಿಂದಾಗಿ ತೀವ್ರ ಆಕ್ರೋಶಕ್ಕೆ ಒಳಗಾದ ಆಕೆಯ ತಂದೆ ಶಿಕ್ಷಕನ ವಿರುದ್ದ ವಿಡಿಯೋ ಮಾಡಿ ಪ್ರತಿಭಟಿಸಿದ್ದರು.
ಈ ವಿಡಿಯೋ ವೈರಲ್ ಆಗಿ ಶಿಕ್ಷಕನ ವಿರುದ್ದ ಪ್ರಾನ್ಸ್ ಮುಸ್ಲಿಂ ಸಮುದಾಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದು ಓರ್ವ 18 ವರ್ಷದ ಮತಾಂಧ ಯುವಕ ಶಿಕ್ಷಕನ ತಲೆಯನ್ನೇ ಕತ್ತರಿಸಿದ್ದು ಅಲ್ಲಾಹು ಅಕ್ಬರ್ ಎಂದು ಜೋರಾಗಿ ಕೂಗಿದ್ದ. ಒಂದೆಡೆ ಇದನ್ನು ಉಗ್ರ ಕೃತ್ಯ ಎಂದು ತೀವ್ರ ಖಂಡನೆ ವ್ಯಕ್ತವಾದರೆ, ಇನ್ನೊಂದೆಡೆ ಶಿಕ್ಷಕನ ವಿರುದ್ದವು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಾಪಿಸಿತು. ಏತನ್ಮಧ್ಯೆ ಈ ಶಿಕ್ಷಕನ ಶಿರಚ್ಛೇದ ಮಾಡಿದ ಯುವಕನನ್ನು ಪೊಲೀಸರು ಶೂಟ್ ಔಟ್ ಮಾಡಿ ಹತ್ಯೆಗೈದಿದ್ದರು.
ಈ ಎರಡು ಜೀವಗಳನ್ನು ಬಲಿ ಪಡೆದುಕೊಂಡ ಘಟನೆಯು ಈಗ ದೊಡ್ಡ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿನಿ ತರಗತಿಯಲ್ಲಿ ಶಿಕ್ಷಕ ಸ್ಯಾಮುವೆಲ್ ಪ್ಯಾಟಿ ಪ್ರವಾದಿ ಮೊಹಮ್ಮದ್ನ ವ್ಯಂಗ್ಯಚಿತ್ರ ತೋರಿಸಿದ್ದ ಎಂದು ಸುಳ್ಳು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಸುಳ್ಳು ಹೇಳಿದ್ದಾದರೂ ಯಾಕೆ?
ವಿದ್ಯಾರ್ಥಿನಿಯು ತರಗತಿಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿದ್ದಳು. ಈ ಕಾರಣದಿಂದಾಗಿ ಆಕೆಯನ್ನು ಶಾಲೆಯಿಂದಲೇ ಅಮಾನತು ಮಾಡಲಾಗಿತ್ತು. ಆಕೆ ಇಂದು ಶಿಕ್ಷಕ ಪ್ರವಾದಿ ಮೊಹಮ್ಮದ್ನ ವ್ಯಂಗ್ಯಚಿತ್ರ ತೋರಿಸಿದ್ದ ಎಂದು ಹೇಳಿದ್ದ ದಿನ ಆಕೆ ಶಾಲೆಗೆ ಹಾಜರಾಗಿರಲಿಲ್ಲ. ಅದರ ಹಿಂದಿನ ದಿನವೇ ಆಕೆಯನ್ನು ಶಾಲೆಯಿಂದ ಅಮಾನತು ಮಾಡಲಾಗಿತ್ತು ಎಂದು ವರದಿಯಾಗಿದೆ.
ಈ ಎಲ್ಲಾ ಘಟನೆಯ ಸುಳಿವು ಕೂಡಾ ವಿದ್ಯಾರ್ಥಿನಿಯ ಪೋಷಕರಿಗೆ ಇರಲಿಲ್ಲ. ಈ ವಿದ್ಯಾರ್ಥಿನಿಯು ತಾನು ಶಾಲೆಗೆ ಹೋಗುತ್ತಿರುವುದಾಗಿ ತನ್ನ ತಂದೆಯನ್ನು ನಂಬಿಸುವ ಸಲುವಾಗಿ ಶಾಲೆಯಲ್ಲಿ ಶಿಕ್ಷಕ ಪ್ರವಾದಿಗೆ ಅವಮಾನ ಮಾಡಿರುವುದಾಗಿ ಕಟ್ಟು ಕತೆಯನ್ನು ವಿವರಿಸಿದ್ದಳು ಎಂದು ಆಕೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ವಿದ್ಯಾರ್ಥಿನಿಯ ಈ ಒಂದು ಸುಳ್ಳು ಎರಡು ಜೀವಗಳ ಹತ್ಯೆಗೆ ಕಾರಣವಾಗಿದೆ.
ಇನ್ನು ತನ್ನ ಮಗಳ ಈ ಕೃತ್ಯದಿಂದಾಗಿ ನಡೆದ ಭಾರೀ ಅನಾಹುತದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಆಕೆಯ ತಂದೆ ವರ್ಜೀನಿ ಲೆ ರಾಯ್, ''ಕ್ಷಮಿಸಿ, ನನ್ನ ಮಗಳ ಸುಳ್ಳನ್ನು ನಾನು ನಂಬಿದೆ. ಈ ಸುಳ್ಳನ್ನು ನಂಬಿ ಬಹುದೊಡ್ಡ ಅನಾಹುತಕ್ಕೆ ನಾನು ದಾರಿ ಮಾಡಿಕೊಟ್ಟೆ'' ಎಂದು ಹೇಳಿದ್ದಾರೆ.