ಕೊಲಂಬಿಯಾ, ಮಾ.11 (DaijiworldNews/PY): ಲೈವ್ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ನಿರೂಪಕರೋರ್ವರ ಮೇಲೆ ಬೃಹತ್ ಟಿವಿ ಸೆಟ್ ಬಿದ್ದ ಘಟನೆ ಕ್ರೀಡಾ ವಾಹಿನಿ ಇಎಸ್ಪಿಎನ್ನ ಕೊಲಂಬಿಯಾದಲ್ಲಿರುವ ಸ್ಟುಡಿಯೋದಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ನಿರೂಪಕನನ್ನು ಕಾರ್ಲೋಸ್ ಒರ್ಡುಜ್ ಎಂದು ಗುರುತಿಸಲಾಗಿದೆ.
ಲೈವ್ ಕಾರ್ಯಕ್ರಮದಲ್ಲಿ ಫುಟ್ಬಾಲ್ ಬಗ್ಗೆ ಪ್ಯಾನಲ್ ಡಿಸ್ಕಷನ್ ನಡೆಯುತ್ತಿತ್ತು. ಈ ಸಂದರ್ಭ ನಿರೂಪಕ ಕುಳಿತಿದ್ದ ಹಿಂಬದಿಯಲ್ಲಿದ್ದ ಟಿವಿ ನಿರೂಪಕನ ಮೇಲೆ ಬಿದ್ದಿದೆ. ಬೃಹತ್ ಟಿವಿ ಬಿದ್ದ ರಭಸಕ್ಕೆ ನಿರೂಪಕ ಮುಂದಿನ ಟೇಬಲ್ಗೆ ಅಪ್ಪಳಿಸಿದ್ದಾನೆ. ಏಕಾಏಕಿ ಟಿವಿ ಬಿದ್ದ ಘಟನೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಸಹ ನಿರೂಪಕರ ಆತಂಕಗೊಂಡಿದ್ದರು.
ಸ್ಟುಡಿಯೋದಲ್ಲಿ ಕ್ಯಾಮೆರಾಗಳು ಆನ್ ಇರುವುದನ್ನು ತಿಳಿದ ಸಹ ನಿರೂಪಕ ಕಾರ್ಯವನ್ನು ಮುಂದುವರೆಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಗೊಂಡ ನಿರೂಪಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಯಾವುದೇ ಗಂಭೀರವಾದ ಪೆಟ್ಟಾಗಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಮೂಗಿಗೆ ಕೊಂಚ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಲೋಸ್ ಒರ್ಡುಜ್ ಅವರೇ ಮಾಹಿತಿ ನೀಡಿದ್ದು, "ನನಗೆ ಯಾವುದೇ ಅಪಾಯವಾಗಿಲ್ಲ. ಮೂಗಿಗೆ ಸ್ವಲ್ಪ ಏಟಾಗಿದ್ದು, ಪರೀಕ್ಷೆ ಮಾಡಿಸಿದ್ದೇನೆ. ಮೂಳೆ ಮುರಿತವಾಗಿಲ್ಲ" ಎಂದು ವೈದ್ಯರು ತಿಳಿಸಿದ್ದಾರೆ ಎಂದಿದ್ದಾರೆ.