ವಾಷಿಂಗ್ಟನ್, ಮಾ.13(DaijiworldNews/PY): "ಇಂಡೋ-ಫೆಸಿಫಿಕ್ ವಲಯಕ್ಕೆ ಕೊರೊನಾ ಲಸಿಕೆಯ ಬಲ ಸಿಗಲಿದ್ದು, ಅಮೇರಿಕಾ ಸೇರಿದಂತೆ ಆಸ್ಟ್ರೇಲಿಯಾ ಹಾಗೂ ಜಪಾನ್ ದೇಶಗಳ ಜಂಟಿ ಆಶ್ರಯದಲ್ಲಿ 2022ರ ಅಂತ್ಯಕ್ಕೆ ಭಾರತ ನೂರು ಕೋಟಿಗೂ ಅಧಿಕ ಕೊರೊನಾ ಲಸಿಕೆಯನ್ನು ಉತ್ಪಾದಿಸಲಿದೆ" ಎಂದು ಅಮೇರಿಕಾ ಹೇಳಿದೆ.
"ಇಂಡೋ-ಫೆಸಿಫಿಕ್ ವಲಯದಲ್ಲಿನ ಲಸಿಕೆ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ದಿಯಾಗುತ್ತಿರುವ ತಂತ್ರಜ್ಞಾನಗಳ ವಿಚಾರದ ಬಗ್ಗೆ ಕ್ವಾಡ್ ದೇಶಗಳ ಮುಖ್ಯಸ್ಥರ ಸಭೆಯಲ್ಲಿ ಭಾರತದ ಕೊರೊನಾ ಲಸಿಕೆ ತಯಾರಿಕೆಯು ನೂತನ ಆಯಾಮ ಪಡೆದುಕೊಂಡಿದೆ" ಎಂದು ತಿಳಿಸಿದೆ.
ಕ್ವಾಡ್ ದೇಶಗಳ ಮುಖ್ಯಸ್ಥರ ಸಭೆಯನ್ನು ಕೊರೊನಾ ಕಾರಣದಿಂದ ವರ್ಚುವಲ್ ರೂಪದಲ್ಲಿ ನಡೆಸಲಾಗುತ್ತಿದೆ. ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್, ಜಪಾನ್ ಪ್ರಧಾನಿ ಯೊಶೀಹಿಡೆ ಸೂಗಾ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಪಾಲ್ಗೊಂಡಿದ್ದರು.
"ಈ ನಾಲ್ಕು ದೇಶಗಳು ಬೃಹತ್ ಲಸಿಕೆ ತಯಾರಿಕೆಯ ಜಂಟಿ ಒಪ್ಪಂದವನ್ನು ಮಾಡಿಕೊಂಡಿದ್ದು, ಲಸಿಕೆಯು 2022ರ ಅಂತ್ಯದ ವೇಳೆಗೆ ಒಂದು ಶತಕೋಟಿ ಲಸಿಕೆ ಉತ್ಪಾದಿಸುವ ಗುರಿ ಹೊಂದಿದೆ. ಇದಕ್ಕೆ ಕ್ವಾಡ್ ದೇಶಗಳ ಸಹಯೋಗ ಕೂಡಾ ಇರಲಿದೆ" ಎಂದು ಅಮೇರಿಕಾ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೆಕ್ ಹೇಳಿದ್ದಾರೆ.
"ಉತ್ಪಾದನೆಗೆ ಜಪಾನ್ ಮತ್ತು ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಆರ್ಥಿಕ ನೆರವು ನೀಡಲಿದೆ, ಇದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಯೋಜನೆಗಳಿಗೆ ಹಣವನ್ನು ಒದಗಿಸುತ್ತದೆ" ಎಂದು ತಿಳಿಸಿದ್ದಾರೆ.
"ಅಮೇರಿಕಾದ ಜಾನ್ಸನ್ ಆಂಡ್ ಜಾನ್ಸನ್ ಹಾಗೂ ಭಾರತದ ಕೆಲವು ಬಯೋ ಕಂಪೆನಿಗಳು ಲಸಿಕೆಯ ತಯಾರಿಕೆಯಲ್ಲಿ ಸೇರಿವೆ" ಎಂದು ಅಮೇರಿಕಾ ತಿಳಿಸಿದೆ.