ಕಾಬೂಲ್, ಮಾ.13 (DaijiworldNews/PY): "ಪ್ರಬಲ ಕಾರು ಬಾಂಬ್ ಸ್ಫೋಟಗೊಂಡು ಎಂಟು ಮಂದಿ ಮೃತಪಟ್ಟು, 47 ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ನಡೆದಿದೆ" ಎಂದು ಶನಿವಾರ ಅಧಿಕಾರಿಗಳು ಹೇಳಿದ್ದಾರೆ.
"ಮಾ.12ರ ಶುಕ್ರವಾ ತಡರಾತ್ರಿ ನಡೆದ ಸ್ಪೋಟದಲ್ಲಿ 14 ಮನೆಗಳು ನಾಶವಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಏಕೆಂದರೆ, ಗಾಯಗೊಂಡವರ ಪೈಕಿ ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ" ಎಂದು ಎಂದು ಪ್ರಾಂತೀಯ ಆಸ್ಪತ್ರೆಯ ವಕ್ತಾರ ರಫೀಕ್ ಶೆರ್ಜೈ ತಿಳಿಸಿದ್ದಾರೆ.
ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ಈ ಬಗ್ಗೆ ಮಾಹಿತಿ ನೀಡಿದ್ದು, "ಸಾವನ್ನಪ್ಪಿದವರ ಪೈಕಿ ಒಬ್ಬರು ಹಾಗೂ ಗಾಯಗೊಂಡವರ ಪೈಕಿ 11 ಮಂದಿ ಅಫ್ಘಾನ್ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ. ಉಳಿದವರು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ನಾಗರಿಕರು" ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯು ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ನ್ಯೂಯಾರ್ಕ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಕತಾರ್ನಲ್ಲಿ ತಾಲಿಬಾನ್ ಹಾಗೂ ಅಫ್ಘಾನ್ ಸರ್ಕಾರವು ಮಾತುಕತೆ ನಡೆಸುತ್ತಿದ್ದರೂ ಕೂಡಾ, ಅಫ್ಘಾನಿಸ್ತಾನದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದ್ದು ಇದನ್ನು ವಿಶ್ವಸಂಸ್ಥೆ ಖಂಡಿಸಿದೆ.
"ನ್ಯಾಯಾಂಗ, ಪೌರಕಾರ್ಮಿಕರು, ಮಾಧ್ಯಮ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಯುತ್ತಿದೆ. ಮುಖ್ಯವಾಗಿ, ಮಹಿಳೆಯರು ಸೇರಿದಂತೆ ಮಾನವ ಹಕ್ಕುಗಳ ರಕ್ಷಣೆ ಮಾಡುವವರು, ಉತ್ತೇಜಿಸುವವರು, ಜನಾಂಗೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ" ಎಂದು ಕೌನ್ಸಿಲ್ ತಿಳಿಸಿದೆ.