ನೈಜೀರಿಯಾ, ಮಾ.13 (DaijiworldNews/PY): ಬಂದೂಕುಧಾರಿ ಗುಂಪೊಂದು ಶಾಲೆಯೊಂದರ ಮೇಲೆ ದಾಳಿ ನಡೆಸಿ 39 ಶಾಲಾ ವಿದ್ಯಾರ್ಥಿಗಳನ್ನು ಅಪಹರಿಸಿದ ಘಟನೆ ನೈಜೀರಿಯಾದಲ್ಲಿ ನಡೆದಿದೆ.
"ಕಡುನಾ ರಾಜ್ಯದಲ್ಲಿರುವ ಅಫಾಕಾ ಗ್ರಾಮದಲ್ಲಿರುವ ಪೆಡರಲ್ ಕಾಲೇಜ್ ಆಫ್ ಫಾರೆಸ್ಟ್ರಿ ಕಾಲೇಜಿನ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ 279 ಶಾಲಾ ವಿದ್ಯಾರ್ಥಿನಿಯರನ್ನು ಬಂಡುಕೋರರು ಅಪಹರಿಸಿದ್ದು, ಹಣ ನೀಡಬೇಕು ಎಂದು ಒತ್ತಾಯಿಸಿದ್ದು ಅಲ್ಲದೇ, ಜೈಲಿನಲ್ಲಿರುವ ತಮ್ಮವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು.
"ಇದೀಗ ಪುನಃ 39 ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ. ದಾಳಿ ನಡೆಸಿದ ವೇಳೆ ಗಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಯಾಮ್ಯುಲ್ ಅರುವಾನ್ ಹೇಳಿದ್ದಾರೆ.
39 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿನಿಯರು ಹಾಗೂ 16 ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಉಗ್ರರು ಅಪಹರಿಸಿರುವ ವಿದ್ಯಾರ್ಥಿಗಳ ಹಡುಕಾಟಕ್ಕಾಗಿ ಸೇನಾಪಡೆಗಳು ಆಗಮಿಸಿವೆ.
"ಬಂಡುಕೋರರು 39 ವಿದ್ಯಾರ್ಥಿಗಳನ್ನು ಅಪಹರಿಸಿ ಆಗಿದ್ದು. ಉಳಿದ 180 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
ಬಂಡುಕೋರರ ಈ ಕೃತ್ಯವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟರ್ಸ್ ಅವರು ಖಂಡಿಸಿದ್ದು, "ತಕ್ಷಣವೇ ಯಾವುದೇ ಷರತ್ತುಗಳಿಲ್ಲದೇ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.
ಕಳೆದ ಬಾರಿ ಅಪಹರಣ ಮಾಡಿದ್ದ ವೇಳೆ ಎಲ್ಲಾ ವಿದ್ಯಾರ್ಥಿಗಳನ್ನು ಸೇನಾ ಪಡೆ ಸುರಕ್ಷಿತವಾಗಿ ಕರೆತಂದಿತ್ತು.
ಆದರೆ, "ಇದುವರೆಗೆ ಹಲವಾರು ಮಹಿಳೆಯರ ಅಪಹರಣವಾಗಿದ್ದು, ಅವರ ಪೈಕಿ ನೂರಾರು ಮಂದಿ ಕಾಣೆಯಾಗಿದ್ದಾರೆ" ಎಂದು ಮೂಲಗಳು ತಿಳಿಸಿವೆ.