ಅಮೇರಿಕಾ, ಮಾ.14 (DaijiworldNews/PY): ಡೆನ್ವರ್ನಲ್ಲಿ ಹಿಮದಿಂದ ಆವೃತ್ತವಾದ ಗಾಳಿ ಬೀಸುತ್ತಿರುವ ಕಾರಣ ವಿಮಾನ ನಿಲ್ದಾಣದಲ್ಲಿ ವಾರಾಂತ್ಯದಲ್ಲಿ ಸುಮಾರು 2,000 ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ರಾಷ್ಟ್ರೀಯ ಹಮಾಮಾನ ಸೇವೆಯು ಹಿಮ ಬಿರುಗಾಳಿಯ ಎಚ್ಚರಿಕೆ ನೀಡಿದ್ದು, ಡೆನ್ವರ್ ಹಾಗೂ ಬೌಲ್ಡರ್ನಲ್ಲಿ ಶನಿವಾರ ಮಧ್ಯಾಹ್ನದಿಂದ ರವಿವಾರ ರಾತ್ರಿಯ ತನಕ 18 ರಿಂದ 24 ಇಂಚುಗಳಷ್ಟು ಹಿಮ ಬೀಳುವ ಸಾಧ್ಯತೆ ಇದೆ. ಇದರಿಂದಾಗಿ ರಸ್ತೆಗಳು ಮುಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆ ಜನರು ಅನಗತ್ಯವಾಗಿ ಪ್ರವಾಸ ಮಾಡದಂತೆ ಸೂಚನೆ ನೀಡಿದೆ.
"ಹಿಮದಿಂದ ಡೆನ್ವರ್, ಮಾನ್ಯುಮೆಂಟ್ ಹಿಲ್ ಸೇರಿದಂತೆ ಕೊಲೊರಾಡೋ ಸ್ಪ್ರಿಂಗ್ಸ್ನಿಂದ ವ್ಯೋಮಿಂಗ್ವರೆಗಿನ ಹೆದ್ದಾರಿ ಮುಚ್ಚುವ ಸಾಧ್ಯತೆ ಇದೆ" ಎಂದು ತಿಳಿಸಿದೆ.
ಈ ಬಗ್ಗೆ ವಿಮಾನ ನಿಲ್ದಾಣದ ವಕ್ತಾರ ಎಮಿಲಿ ವಿಲಿಯಮ್ಸ್ ಮಾಹಿತಿ ನೀಡಿದ್ದು, "ಬಿರುಗಾಳಿಯ ಕಾರಣದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ 750 ವಿಮಾನ ಹಾಗೂ ರವಿವಾರ 1,300 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ" ಎಂದು ಹೇಳಿದ್ದಾರೆ.