ಲಂಡನ್, ಮಾ.16 (DaijiworldNews/MB) : ಕೊರೊನಾ ನಿಯಂತ್ರಣಕ್ಕಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆ ಸಂಶೋಧಿಸಿದ್ದ ಲಸಿಕೆಯಿಂದಾಗಿ ಗಂಭೀರ ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬ ಕಾರಣ ನೀಡಿ ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳು ಲಸಿಕೆ ಉಪಯೋಗಕ್ಕೆ ತಮ್ಮ ದೇಶದಲ್ಲಿ ನಿರ್ಬಂಧ ಹೇರಿದೆ.
ಇತ್ತೀಚೆಗಷ್ಟೇ ನೆದರ್ಲ್ಯಾಂಡ್ ಕೋವಿಶೀಲ್ಡ್ ಲಸಿಕೆ ಬಳಕೆಗೆ ನಿರ್ಬಂಧ ಹೇರಿದ್ದು ಈವರೆಗೆ ಒಟ್ಟು 10 ದೇಶಗಳು ಕೋವಿಶೀಲ್ಡ್ ಲಸಿಕೆ ಬಳಕೆಗೆ ನಿರ್ಬಂಧ ಹೇರಿದೆ. ಈಗ ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳು ಕೂಡ ಈ ಲಸಿಕೆ ಬಳಕೆಗೆ ನಿರ್ಬಂಧ ಹೇರಿದ್ದು ಈ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ರಕ್ತ ತೀವ್ರ ಪ್ರಮಾಣದಲ್ಲಿ ಹೆಪ್ಪುಗಟ್ಟಲು ಆರಂಭಿಸಿದೆ ಎಂಬ ಗಂಭೀರ ಕಾರಣ ನೀಡಿದೆ. ಮುಖ್ಯವಾಗಿ ನಾರ್ವೆ, ಐಲೆಂಡ್, ಆಸ್ಟ್ರಿಯಾ, ಎಸ್ಟೋನಿಯಾ, ಲಿಥುವೇನಿಯಾ, ಡೆನ್ಮಾರ್ಕ್, ಬಲ್ಗೇರಿಯಾ, ಲಕ್ಸೆಂಬರ್ಗ್ ಮತ್ತು ಲಾಟ್ವಿಯಾದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆ ಸಂಶೋಧಿಸಿದ್ದ ಕೋವಿಶೀಲ್ಡ್ ಲಸಿಕೆ ಬಳಕೆ ನಿಷೇಧಿಸಿದೆ.
ಆದರೆ ಇದನ್ನು ಅಲ್ಲಗಳೆದಿರುವ ಆಸ್ಟ್ರಾಜೆನೆಕಾ ಸಂಸ್ಥೆ ಲಸಿಕೆಯಿಂದ ಯಾವುದೇ ಪರಿಣಾಮಗಳಿಲ್ಲ ಎಂದು ಹೇಳಿದೆ. ಯೂರೋಪ್ ಮತ್ತು ಬ್ರಿಟನ್ನಲ್ಲಿ ಸುಮಾರು 17 ಮಿಲಿಯನ್ ಮಂದಿಗೆ ಈ ಲಸಿಕೆ ನೀಡಿದ್ದೇವೆ. ಇವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಮಾಣ ಭಾರೀ ಕಡಿಮೆಯಿದೆ. ನಮ್ಮ ಸಂಸ್ಥೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದೆ.
ಇನ್ನು ಪ್ರಸ್ತುತ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿ ಮಾರಾಟ ಮಾಡುತ್ತಿದೆ.