ಯಾಂಗೊನ್, ಮಾ.16 (DaijiworldNews/HR): ಮ್ಯಾನ್ಮಾರ್ನಲ್ಲಿ ಮಿಲಿಟರಿ ದಂಗೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರತಿಭಟನೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ 'ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್' (ಎಎಪಿಪಿ) ಸಂಸ್ಥೆ ತಿಳಿಸಿದೆ ಎನ್ನಲಾಗಿದೆ.
ಮಿಲಿಟರಿ ಸರ್ಕಾರದ ವಿರುದ್ಧ ಮ್ಯಾನ್ಮಾರ್ನಲ್ಲಿ ನಾಗರಿಕರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಮೇಲೆ ಭದ್ರತಾ ಪಡೆಗಳು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಸಿಡಿಸುತ್ತಿದ್ದು, ಜೊತೆಗೆ ಕೆಲವೊಮ್ಮೆ ಜೀವಂತ ಗುಂಡುಗಳನ್ನು ಹಾರಿಸುತ್ತಿದ್ದು,ಪ್ರತಿ ನಿತ್ಯ ಪ್ರತಿಭಟನಾನಿರತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಇನ್ನು ಫೆ.1ರಂದು ಆಂಗ್ ಸಾನ್ ಸೂ ಕಿ ನೇತೃತ್ವದ ಎನ್ಎಲ್ ಡಿ ಸರ್ಕಾರವನ್ನು ತೆಗೆದು ಹಾಕಿ, ಮಿಲಿಟರಿ ಆಡಳಿತ ಜಾರಿಗೆ ಬಂದಾಗಿನಿಂದ ಇಡೀ ಮ್ಯಾನ್ಮಾರ್ನಲ್ಲಿ ಕೋಲಾಹಲ ಉಂಟಾಗಿದ್ದು, ನಾಗರಿಕರು ಮತ್ತು ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು, ಮಿಲಿಟರಿ ಸರ್ಕಾರ ತೆಗೆದು ಹಾಕಿ, ಪ್ರಜಾಪ್ರಭುತ್ವವನ್ನು ಮರಳಿ ತರುವುದಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.