ವಾಷಿಂಗ್ಟನ್, ಮಾ.17 (DaijiworldNews/MB) : ಅಮೇರಿಕಾದ ಅಟ್ಲಾಂಟಾ ನಗರದ ವಿವಿಧ ಮಸಾಜ್ ಪಾರ್ಲರ್ಗಳಲ್ಲಿ ಗುಂಡಿನ ದಾಳಿ ನಡೆದಿದ್ದು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರು ಏಷ್ಯಾದವರು ಆಗಿದ್ದಾರೆ. ಅಮೇರಿಕಾದ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 5ರಿಂದ 6ಗಂಟೆಯ ವೇಳೆಯಲ್ಲಿ ಈ ಮೂರೂ ಗುಂಡಿನ ದಾಳಿ ನಡೆದಿದೆ.
ಅಟ್ಲಾಂಟಾದ ಹೊರವಲಯದ ಆಕ್ವರ್ತ್ ಗ್ರಾಮೀಣ ಭಾಗದಲ್ಲಿದ್ದ ಯಂಗ್ಸ್ ಏಷ್ಯನ್ ಮಸಾಜ್ ಪಾರ್ಲರ್, ಬಕ್ಹೆಡ್ ಪ್ರದೇಶದಲ್ಲಿದ್ದ ಗೋಲ್ಡ್ ಸ್ಪಾ ಹಾಗೂ ಅದೇ ಸ್ಥಳದಲ್ಲಿದ್ದ ಇನ್ನೊಂದು ಮಸಾಜ್ ಪಾರ್ಲರ್ ಅರೋಮಾಥೆರಪಿ ಸ್ಪಾದಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಏಷ್ಯನ್ ಅಮೇರಿಕನ್ ಸಮುದಾಯದ ಮೇಲೆ ಅಮೇರಿಕಾದಲ್ಲಿ ಅಧಿಕವಾಗುತ್ತಿರುವ ದಾಳಿಯ ನಡುವೆ ಈ ಘಟನೆ ನಡೆದಿದ್ದು ಮೂರು ಮಸಾಜಾ ಪಾರ್ಲರ್ಗಳ ಪೈಕಿ ಎರಡು ಏಷ್ಯನ್ರಿಗೆ ಸೇರಿದ್ದಾಗಿದೆ.
ಇನ್ನು ಈ ಪೈಕಿ ಆಕ್ವರ್ತ್ನಲ್ಲಿ ಗುಂಡಿನ ದಾಳಿ ನಡೆಸಿರುವ ಶಂಕೆಯಲ್ಲ ಓರ್ವ 21 ವರ್ಷದ ರಾಬರ್ಟ್ ಆರೋನ್ ಲಾಂಗ್ ಎಂಬ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದು ಕೃತ್ಯದ ಹಿಂದಿನ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಶೂಟೌಟ್ ನಡೆದ ಒಂದು ಸ್ಥಳದಲ್ಲಿದ್ದ ಸಿಸಿಟಿವಿ ಆಧರಿಸಿ ಪೊಲೀಸರು ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.