ವಿಶ್ವಸಂಸ್ಥೆ, ಮಾ.17 (DaijiworldNews/PY): "ಪ್ರಜಾಪ್ರಭುತ್ವದ ಯಶಸ್ಸು ಮಹಿಳೆಯರ ಸಬಲೀಕರಣದಲ್ಲೇ ಅಡಗಿದೆ" ಎಂದು ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಮಹಿಳೆಯರ ಸ್ಥಾನಮಾನ ಕುರಿತು ವಿಶ್ವಸಂಸ್ಥೆ ಆಯೋಜಿಸಿದ್ದ 65ನೇ ಅಧಿವೇಶನದಲ್ಲಿ ಮಾತನಾಡಿದ ಅವರು, "ಮಹಿಳೆಯರ ಸಬಲೀಕರಣದಲ್ಲೇ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಮಹಿಳೆಯರನ್ನು ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ದೂರವಿಟ್ಟರೆ ಆ ಪ್ರಜಾಪ್ರಭುತ್ವವು ದೋಷದಿಂದ ಕೂಡಿರುತ್ತದೆ" ಎಂದಿದ್ದಾರೆ.
ಕಮಲಾ ಹ್ಯಾರಿಸ್ ಅವರು ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ವಿಶ್ವಸಂಸ್ಥೆಯನ್ನುದ್ದೇಶಿಸಿ ಮಾತನಾಡಿದರು.
"ಪ್ರಜಾಪ್ರಭುತ್ವ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಅಪಾಯ ಎದುರಿಸುತ್ತಿರುವುದನ್ನು ಕಂಡಿದ್ದೇವೆ. ಅಲ್ಲದೇ ಕಳೆದ 15 ವರ್ಷಗಳ ಅವಧಿಯಲ್ಲಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿರುವುದನ್ನು ಕೂಡಾ ಕಾಣಬಹುದಾಗಿದೆ. ಕಳೆದ ವರ್ಷ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಹೆಚ್ಚು ಧಕ್ಕೆವುಂಟಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.