ಫ್ಲೋರಿಡಾ, ಮಾ18 (DaijiworldNews/MS): ಕೊರೊನಾ ವೈರಸ್ ನ ಪ್ರತಿಕಾಯಗಳನ್ನು ಹೊಂದಿರುವ ವಿಶ್ವದ ಮೊದಲ ಶಿಶು ಜನಿಸಿದೆ ಎಂದು ವರದಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ನ ದಕ್ಷಿಣ ಫ್ಲೋರಿಡಾದಲ್ಲಿ ಪ್ರತಿಕಾಯ ಹೊಂದಿರುವ ಮಗು ಜನಿಸಿದೆ ಎಂದು ಮಕ್ಕಳ ತಜ್ಞರು ಧೃಡಪಡಿಸಿದ್ದಾರೆ.
ಈ ಮಗುವಿನ ತಾಯಿಯು 36 ವಾರಗಳ ಗರ್ಭಿಣಿಯಾಗಿದ್ದಾಗ ಜನವರಿಯಲ್ಲಿ ಮಾಡರ್ನಾ ಶೂಟ್ ನ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದು ಮೊದಲ ಡೋಸ್ ನ ಮೂರು ವಾರಗಳ ನಂತರ ಮಹಿಳೆ 'ಆರೋಗ್ಯವಂತ' ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಅಲ್ಲಿನ ವೈದ್ಯರಾದ ಪಾಲ್ ಗಿಲ್ಬರ್ಟ್ ಮತ್ತು ಚಾಡ್ ರುಡ್ನಿಕ್ ಹೇಳಿದ್ದಾರೆ.
ಮಗುವಿನ ಜನನದ ನಂತರ ತೆಗೆದ ರಕ್ತದ ಮಾದರಿಯು SARS-CoV-2 ವೈರಸ್ ವಿರುದ್ಧ ಪ್ರತಿಕಾಯಗಳ ಉತ್ಪತ್ತಿಯಾಗಿರುವುದು ದೃಢಪಟ್ಟಿತು ಎಂದು ವೈದ್ಯರ ತಂಡದ ಅಧ್ಯಯನವು ತಿಳಿಸಿದೆ.
ಮಗುವಿನ ಹೊಕ್ಕುಳಬಳ್ಳಿಯ ರಕ್ತವನ್ನು ವಿಶ್ಲೇಷಿಸುವ ಮೂಲಕ, ಪ್ರಸವದ ಸಮಯದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿತ್ತು. ಇದರ ಆಧಾರದ ಮೇಲೆ ಗರ್ಭಿಣಿಯರಿಗೆ ಲಸಿಕೆ ಹಾಕುವ ಮೂಲಕ ಸೋಂಕು ಪ್ರಮಾಣವನ್ನು ತಡೆಗಟ್ಟಬಹುದೆಂದು ವೈದ್ಯರು ತಿಳಿಸಿದ್ದಾರೆ.
28 ದಿನಗಳ ವ್ಯಾಕ್ಸಿನೇಷನ್ ಪ್ರೋಟೋಕಾಲ್ ಪ್ರಕಾರ ಮಗುವಿಗೆ ಹಾಲುಣಿಸುವ ಆ ತಾಯಿ, ಎರಡನೇ ಡೋಸ್ ನ್ನು ಕೂಡಾ ಪಡೆದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.