ವಾಷಿಂಗ್ಟನ್, ಮಾ.19 (DaijiworldNews/PY): ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಎಚ್-1ಬಿ ಸೇರಿದಂತೆ ವೃತ್ತಿಪರರಿಗೆ ನೀಡುವ ವಿವಿಧ ವೀಸಾಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವು ಮಾಡುವಂತೆ ಡೆಮಾಕ್ರಟಿಕ್ ಪಕ್ಷದ ಐವರು ಪ್ರಭಾವಿ ಸೆನೆಟ್ ಸದಸ್ಯರು ಒತ್ತಾಯಿಸಿದ್ದಾರೆ.
ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಸಂಸದರು, "ವೀಸಾದ ಮೇಲಿನ ನಿಷೇಧವನ್ನು ಮುಂದುವರೆಸಿದ್ದೇ ಆದಲ್ಲಿ, ಅಮೇರಿಕಾದ ಕಂಪೆನಿಗಳು ಸೇರಿದಂತೆ ಉದ್ಯೋಗಿಗಳು ಹಾಗೂ ಅವರ ಕುಟುಂಬಗಳು ಅನಿಶ್ಚಿತತೆಯಲ್ಲಿಯೇ ಇರಬೇಕಾಗುತ್ತದೆ" ಎಂದಿದ್ದಾರೆ.
"ವೀಸಾ ಮೇಲಿನ ನಿಷೇಧವನ್ನು ತೆರವುಗೊಳಿಸದಿದ್ದರೆ, ವಲಸೆ ವ್ಯವಸ್ಥೆ ಇನ್ನಷ್ಟು ಜಟಿಲವಾಗುತ್ತದೆ. ವಿವಿಧ ದೇಶಗಳ ಪ್ರತಿಭಾವಂತ ವ್ಯಕ್ತಿಗಳು ಅಮೇರಿಕಾದ ಬದಲು ಬೇರೆ ರಾಷ್ಟ್ರಗಳತ್ತ ತೆರಳುತ್ತಾರೆ" ಎಂದಿದ್ದಾರೆ.
ಕೊರೊನಾ ಕಾರಣದಿಂದ ಸ್ಥಳೀಯರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆ ಬೇರೆ ಬೇರೆ ದೇಶಗಳಿಂದ ಐಟಿ ಸೇರಿ ವಿವಿಧ ವೃತ್ತಿಪರರು ಅಮೇರಿಕಾಕೆಕ ಆಗಮಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭ ವೀಸಾಗಳ ಮೇಲೆ ನಿಷೇಧ ಹೇರಿದ್ದರು.