ಇಂಡೋನೇಷ್ಯಾ, ಮಾ.19 (DaijiworldNews/HR): ಸುನಾಮಿ ದುರಂತದಲ್ಲಿ ಸಾವನ್ನಪ್ಪಿದ್ದ ಎಂದು ನಂಬಲಾಗಿದ್ದ ಪೊಲೀಸ್ ಅಧಿಕಾರಿಯೋರ್ವ 17 ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿ, ಇದೀಗ ತನ್ನ ಕುಟುಂಬ ಸೇರಿದ ಘಟನೆ ನಡೆದಿದೆ.
2004ರಲ್ಲಿ ಸಂಭವಿಸಿದ ಸುನಾಮಿ ಭಾರತ, ಶ್ರೀಲಂಕಾ, ಥೈಲ್ಯಾಂಡ್ ಹಾಗೂ ಇಂಡೋನೇಷ್ಯಾ ದೇಶಗಳಲ್ಲಿ ಅಪಾರ ಹಾನಿಯನ್ನುಂಟು ಮಾಡಿದ್ದು, ಈ ದುರಂತದಲ್ಲಿ ಇಂಡೋನೇಷ್ಯಾದ 2,30,000 ಜನರು ಪ್ರಾಣ ಕಳೆದುಕೊಂಡಿದ್ದರು ಎನ್ನಲಾಗಿದೆ.
ಪೊಲೀಸ್ ಆಫೀಸರ್ ಆಗಿದ್ದ ಅಬ್ರಿಪ್ ಅಸೆಪ್ ಕೂಡ ಸುನಾಮಿಯಲ್ಲಿ ಕಣ್ಮರೆಯಾಗಿದ್ದು, ಸುನಾಮಿ ಸೆಳೆಯಲ್ಲಿ ಈತ ನಾಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲ ದಿನಗಳ ನಂತರ ಅಸೆಪ್ ಸಾವನ್ನಪ್ಪಿದ್ದಾನೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಆದರೆ ಇದೀಗ ಅಬ್ರಿಪ್ ಅಸೆಪ್ ಬದುಕಿದ್ದಾನೆ ಎನ್ನುವ ಸುದ್ದಿ ಆತನ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಎಲ್ಲರೂ ಖುಷಿಯಿಂದ ಅಸೆಪ್ ಅವರನ್ನು ಮನೆಗೆ ಕರೆತಂದಿದ್ದಾರೆ.
ಇನ್ನು ಅಬ್ರಿಪ್ ಅಸೆಪ್ ದೈಹಿಕವಾಗಿ ಚೆನ್ನಾಗಿದ್ದು, ಮಾನಸಿಕ ರೋಗಕ್ಕೆ ತುತ್ತಾಗಿದ್ದಾನೆ. ಸುನಾಮಿ ದುರಂತ ಕಣ್ಣಾರೆ ಕಂಡಿದ್ದರಿಂದ ಆತ ಮನೋವೈಕಲ್ಯಕ್ಕೆ ಒಳಗಾಗಿದ್ದಾನೆ. ಕಳೆದ 17 ವರ್ಷಗಳಿಂದ ಅಚೆ ಎನ್ನುವ ಪ್ರದೇಶದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.