ಸ್ಯಾನ್ ಫ್ರಾನ್ಸಿಸ್ಕೋ, ಮಾ. 20(DaijiworldNews/HR): ಮಾಸ್ಕ್ ಧರಿಸಲು ನಿರಾಕರಿಸಿದ ಮತ್ತು ಉಬರ್ ಚಾಲಕನ ಮೇಲೆ ಉದ್ದೇಶ ಪೂರ್ವಕವಾಗಿ ಕೆಮ್ಮಿ ಉಗಿದಿದ್ದ ದೃಶ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ಅರ್ನಾ ಕಿಮಿಯಾ ಎಂಬ ಮಹಿಳೆ ವಿರುದ್ಧ ದರೋಡೆ ಮತ್ತು ಹಲ್ಲೆ ಯತ್ನ ಕೇಸು ದಾಖಲಿಸಲಾಗಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕಿಮಿಯಾಗೆ 3000 ದಂಡ ಮತ್ತು 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಉಬರ್, ಲಿಫ್ಟ್ ಮತ್ತು ಇತರ ಕ್ಯಾಬ್ ಕಂಪನಿಗಳು ತಮ್ಮ ಸೇವೆಗಳನ್ನು ಪಡೆಯುವುದನ್ನು ನಿಷೇಧಿಸಿವೆ.
ತನ್ನ ಇಬ್ಬರು ಸ್ನೇಹಿತರೊಂದಿಗೆ, ಕಿಮಿಯಾ ಸ್ಯಾನ್ ಫ್ರಾನ್ಸಿಸ್ಕೋದ ಸುಭಾಕರ್ ಖಡ್ಕಾ ಎಂಬ ಚಾಲಕನ ಮೇಲೆ ಕೆಮ್ಮುತ್ತಿರುವುದು ಕಂಡುಬಂದಿದ್ದು, ಮಾಸ್ಕ್ ಧರಿಸಲು ನಿರಾಕರಿಸಿದ್ದರಿಂದ ಅವಳು ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದಾಳೆ ಎನ್ನಲಾಗಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ, ಚಾಲಕ ಖಡ್ಕಾಗೆ ಬೆಂಬಲ ಮತ್ತು ಅಪರಾಧಿಗಳಿಗೆ ಆಕ್ರೋಶ ವ್ಯಕ್ತವಾಗಿತ್ತು.
ನೇಪಾಳಿ ಮೂಲದ ಉಬರ್ ಚಾಲಕ ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.