ಬೈರುತ್, ಮಾ.22 (DaijiworldNews/PY): ಸಿರಿಯಾ ಸರ್ಕಾರ, ಉಗ್ರದ ವಶದಲ್ಲಿರುವ ಆಸ್ಪತ್ರೆಯ ಮೇಲೆ ಶೆಲ್ ದಾಳಿ ನಡೆಸಿದ ಪರಿಣಾಮ ಒಂದು ಮಗು ಸೇರಿದಂತೆ ಆರು ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ.
"ಶೆಲ್ ದಾಳಿ ಪರಿಣಾಮ ಇತರೆ 17 ಮಂದಿ ತೀವ್ರ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ಕು ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಟರ್ಕಿಗೆ ಸಾಗಿಸಲಾಗಿದೆ" ಎಂದು ಸಿರಿಯಾ ಅಮೆರಿಕನ್ ಮೆಡಿಕಲ್ ಸೊಸೈಟಿ ವಕ್ತಾರ ಫಾದಿ ಹಕೀಮ್ ಹೇಳಿದ್ದಾರೆ.
ಶೆಲ್ ದಾಳಿಯಿಂದ ಆಸ್ಪತ್ರೆಯ ಬಹುತೇಕ ಭಾಗ ನಾಶವಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಪರಿಹಾರ ಸಿಬ್ಬಂದಿ ದೌಡಾಯಿಸಿದ್ದು ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ.
ಸಿರಿಯಾ ಸರ್ಕಾರದ ಈ ನಡೆಯನ್ನು ಹಲವು ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.