ಕ್ಯಾಲಿಫೋರ್ನಿಯಾ, ಮಾ 24 (DaijiworldNews/MS): ಅಮೆರಿಕಾದ ಕ್ಯಾಲಿಫೋರ್ನಿಯಾದ ನ್ಯಾಯಾಲಯವು ಭಾರತೀಯನಿಗೊಬ್ಬನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ದೀಪಾಂಶು ಖೇರ್ ಎಂದು ಗುರುತಿಸಲಾಗಿದೆ. ಈತ ಕೆಲಸ ಮಾಡುತ್ತಿದ್ದ ಕಂಪನಿಯಿಂದ ವಜಾಗೊಂಡ ನಂತರವೂ ಸಂಸ್ಥೆಯ ಸರ್ವರ್ ಅನ್ನು ಪ್ರವೇಶಿಸಿ 1,200 ಕ್ಕೂ ಹೆಚ್ಚು ಮೈಕ್ರೋಸಾಫ್ಟ್ ಬಳಕೆದಾರರ ಖಾತೆಗಳನ್ನು ಅಳಿಸಿ ಹಾಕಿದ ಆರೋಪ ಈತನ ಮೇಲಿದೆ,
ಈತ ಭಾರತದಿಂದ ಜನವರಿ 11ರಂದು ಅಮೆರಿಕಕ್ಕೆ ವಾಪಾಸ್ಸಾಗಿದ್ದು, ಈ ಹಿಂದೆಯೇ ಆತನ ವಿರುದ್ದ ವಾರೆಂಟ್ ಹೊರಡಿಸಲಾಗಿತ್ತು. ಶಿಕ್ಷೆಯನ್ನು ಪ್ರಕಟಿಸುವ ಸಂದರ್ಭದಲ್ಲಿ, ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮರ್ಲಿನ್ ಹಫ್ ಅವರು "ಈ ವಿಧ್ವಂಸಕ ಕೃತ್ಯವು ಈ ಕಂಪನಿಗೆ ವಿನಾಶಕಾರಿಯಾಗಿದೆ. ಕಂಪನಿ ಮೇಲೆ ಅತ್ಯಾಧುನಿಕ ದಾಳಿ ನಡೆಸಿದ್ದು ಇದೊಂದು ಪೂರ್ವಯೋಜಿತ ಪ್ರತಿಕಾರದ ಕೃತ್ಯ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಬಂಧನದ ಜೊತೆಗೆ, ನ್ಯಾಯಾಧೀಶ ಹಫ್ ಖೇರ್ಗೆ ಮೂರು ವರ್ಷಗಳ ಮೇಲ್ವಿಚಾರಣೆಯ ಬಿಡುಗಡೆ ಮತ್ತು 567,084 ಡಾಲರ್ಗಳಷ್ಟು ಕಂಪನಿಗೆ ಮರುಪಾವತಿ ಮಾಡಬೇಕೆಂದು ಆದೇಶಿಸಿದರು. ಇದು ಖೇರ್ನಿಂದ ಉದ್ಬವಿಸಿದ ಸಮಸ್ಯೆಗಳನ್ನು ಪರಿಹರಿಸಲು ಕಂಪನಿಯು ಪಾವತಿಸಿದ ಮೊತ್ತವಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಖೇರ್ ಅವರನ್ನು ಮಾಹಿತಿ ತಂತ್ರಜ್ಞಾನ ಸಲಹಾ ಸಂಸ್ಥೆ 2017 ರಿಂದ ಮೇ 2018 ರವರೆಗೆ ನೇಮಿಸಿಕೊಂಡಿತ್ತು. ಮೈಕ್ರೋಸಾಫ್ಟ್ ಆಫೀಸ್ 365 (ಎಂಎಸ್ ಒ 365)ಸಹಾಯ ಮಾಡಲು ಕಾರ್ಲ್ಸ್ಬಾದ್ ಕಂಪನಿಯನ್ನು 2017 ರಲ್ಲಿ ಸಲಹಾ ಸಂಸ್ಥೆಯನ್ನು ನೇಮಿಸಿಕೊಂಡಿತ್ತು.