ಢಾಕಾ, ಮಾ.27 (DaijiworldNews/MB) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಢಾಕಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಈ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಅಲಾವುದ್ದೀನ್ ತಾಲ್ಲೂಕದರ್, ಘರ್ಷಣೆಯಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮೋದಿ ಭೇಟಿ ವಿರೋಧಿಸಿ ಪೊಲೀಸರ ಜೊತೆ ಆಗ್ನೇಯ ಚಟ್ಟೋಗ್ರಾಮ್ ಜಿಲ್ಲೆಯ ಪ್ರಮುಖ ಮದರಸಾ ಅಥವಾ ಇಸ್ಲಾಮಿಕ್ ಶಾಲೆಯ ವಿದ್ಯಾರ್ಥಿಗಳು ಮತ್ತು ಇಸ್ಲಾಮಿಕ್ ಗುಂಪಿನ ಸದಸ್ಯರು ಘರ್ಷಣೆ ನಡೆಸಿದ ಪರಿಣಾಮ ಈ ಸಾವು ಸಂಭವಿಸಿದೆ. ಢಾಕಾದ ಪ್ರಮುಖ ಮಸೀದಿ ಬಳಿ ಪೊಲೀಸರು ಹಾಗೂ ಪ್ರತಿಭಟನಾಕಾರರ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಪ್ರತಿಭಟನಾಕಾರರು ಬ್ರಹ್ಮನ್ಬರಿಯ ಜಿಲ್ಲೆಯಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿ ರೈಲ್ವೆ ನಿಲ್ದಾಣದ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಹೆಫಜತ್-ಇ-ಇಸ್ಲಾಂ ಗುಂಪಿನ ಸದಸ್ಯರು ಚಟ್ಟೋಗ್ರಾಮ್ನ ಹಥಜಾರಿ ಪ್ರದೇಶದಲ್ಲಿ ಪೊಲೀಸ್ ಠಾಣೆ ಮತ್ತು ಭೂ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಕ್ರಮ ಜರುಗಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾ ಬಳಿಕ ಪ್ರಧಾನಿ ಮೋದಿಯ ಮೊದಲ ವಿದೇಶ ಭೇಟಿ ಇದಾಗಿದೆ. ಬಾಂಗ್ಲಾದ ಕೆಲವು ಗುಂಪು ಮೋದಿ ಭೇಟಿಯನ್ನು ವಿರೋಧಿಸಿ ಮೋದಿಗೆ ಆಹ್ವಾನ ನೀಡಿದ ಪ್ರಧಾನಿ ಶೇಖ್ ಹಸೀನಾ ಅವರನ್ನೂ ಟೀಕೆ ಮಾಡಿದ್ದರು.