ಕಾರಿಯೋ, ಮಾ.27 (DaijiworldNews/MB) : ಸೂಯೆಜ್ ಕಾಲುವೆಯಲ್ಲಿ ನಿಂತಿರುವ ಒಂದೇ ಒಂದು ಹಡಗು ಇಡೀ ವಿಶ್ವದಲ್ಲೇ ವ್ಯಾಪಾರ ವಹಿವಾಟು ತಲ್ಲಣಗೊಂಡಿದೆ. ಮಾರ್ಚ್ 22ರಂದು ನಡೆದ ಈ ಘಟನೆಯ ಗಂಭೀರತೆ ಈಗ ಅರಿವಿಗೆ ಬರಲಾರಂಭಿಸಿದೆ. ಈ ಒಂದು ಹಡಗು ಸ್ಥಗಿತಗೊಂಡ ಕಾರಣ ಜಾಗತಿಕ ವ್ಯಾಪಾರ- ವಹಿವಾಟುಗಳ ಮೇಲೆ ಪ್ರಭಾವ ಬೀರಿದೆ. ಈಗಾಗಲೇ ಕಾರಿನಿಂದ ಪ್ಲಾಸ್ಟಿಕ್ವರೆಗೂ ಉತ್ಪಾದನಾ ಕೈಗಾರಿಕೆಗಳ ಮೇಲೆ ಇದರ ಪರಿಣಾಮ ಆರಂಭವಾಗಿದೆ.
ಈ ಹಡಗನ್ನು ಸರಿಪಡಿಸಲು ಶುಕ್ರವಾರ ಮಾಡಿದ ಪ್ರಯತ್ನವೂ ವಿಫಲವಾದ ಬಳಿಕ ಜಾಗತಿಕ ವ್ಯವಹಾರದಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ. ಎವರ್ ಗಿವನ್ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ದಿನದಿಂದ ಒಂದು ದಿನಕ್ಕೆ 1000 ಕೋಟಿ ಅಮೇರಿಕನ್ ಡಾಲರ್ ಭಾರತ ರೂಪಾಯಿ ಲೆಕ್ಕದಲ್ಲಿ 72,000 ಕೋಟಿಗೂ ಅಧಿಕ ಹಣ ನಷ್ಟವಾಗುತ್ತಿದೆ. ಇದು ವಿಶ್ವದ ವ್ಯಾಪಾರ ವ್ಯವಹಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಸೂಯೆಜ್ ಬಳಿ 200ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ. ಇನ್ನು ಐದು ದಿನದೊಳಗೆ ಮತ್ತೆ 137 ಸೇರ್ಪಡೆ ಆಗಲಿವೆ ಎನ್ನಲಾಗುತ್ತಿದೆ.
ಸೂಯೆಜ್ ಕಾಲುವೆಯಲ್ಲಿ ಅಡ್ಡಡ್ಡ ತಿರುಗಿ ನಿಂತು, ಸಂಚಾರ ದಟ್ಟಣೆಗೆ ಕಾರಣವಾಗಿರುವ 1312 ಅಡಿ ಉದ್ದ ಹಾಗೂ 193 ಅಡಿ ಅಗಲದ ಎವರ್ ಗಿವನ್ನ್ ಸಮಸ್ಯೆ ಪರಿಹರಿಸಲು ನೆರವಾಗುತ್ತೇವೆ ಎಂದು ಅಮೇರಿಕಾವು ಈಜಿಪ್ಟ್ಗೆ ಭರವಸೆ ನೀಡಿದೆ.
ಅಗತ್ಯ ವಸ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವುದರಲ್ಲೇ ಪೂರೈಕೆ ಜಾಲದ ವ್ಯವಹಾರ ನಿಂತಿದೆ ಎಂದು ವಿಶ್ವದ ಅತಿ ದೊಡ್ಡ ಶಿಪ್ಪಿಂಗ್ ಕಂಪೆನಿಯ ಮಾಲೀಕರೊಬ್ಬರು ಹೇಳಿದ್ದಾರೆ. ಎಪಿ ಮೊಲ್ಲರ್- ಮೆರೆಸ್ಕ್ ಮುಖ್ಯಾಧಿಕಾರಿ ಸೊರೆನ್ ಸ್ಕೌ ಪ್ರಕಾರ ಈ ಒಂದು ಹಡಗು ಸ್ಥಗಿತಗೊಂಡ ಪ್ರಭಾವ ಜಾಗತಿಕ ವ್ಯಾಪಾರ- ವಹಿವಾಟುಗಳ ಮೇಲೆ ಆರಂಭವಾಗಲಿದೆ. ಹಡಗಿನಲ್ಲಿ ರಫ್ತಾಗುತ್ತಿರುವ ವಸ್ತುಗಳು ಅಗತ್ಯದ್ದು ಎಂದಾದರೆ ಅದನ್ನು ಮತ್ತೆ ಉತ್ಪಾದಿಸಿ ವಿಮಾನದ ಮೂಲಕ ರವಾನೆ ಮಾಡುವುದು ಮಾತ್ರ ಸದ್ಯ ನಮ್ಮ ಮುಂದಿರುವ ದಾರಿ, ಬೇರೆ ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಎವರ್ ಗಿವನ್ ಹಡಗು ತಕ್ಷಣಕ್ಕೆ ಮುಕ್ತವಾದರೂ ಜಾಗತಿಕ ಮಟ್ಟದಲ್ಲಿ ಬಾಕಿಯಾದ ಶಿಪ್ಪಿಂಗ್ಗಳ ಸರಿ ಹೋಗುವಿಕೆಗೆ ತಿಂಗಳುಗಳೇ ಬೇಕಾಗುತ್ತದೆ ಎಂದೂ ಸ್ಕೌ ಹೇಳಿದ್ದಾರೆ. ಈ ನಡುವೆ ಹಡಗಿನಲ್ಲಿರುವ ನೂರಾರು ಕೋಟಿ ಡಾಲರ್ ಮೌಲ್ಯದ ವಸ್ತುಗಳು ದರೋಡೆ ಆಗುವ ಆತಂಕವೂ ಕೂಡಾ ಕಂಪೆನಿಗಳಿಗೆ ಉಂಟಾಗಿದೆ. ಪೂರ್ವ ಆಫ್ರಿಕಾ ಕಳ್ಳತನಕ್ಕೆ ಕುಖ್ಯಾತವಾಗಿದೆ. ಸಮುದ್ರ ಮಾರ್ಗದಲ್ಲಿ ಅಪಹರಣ ಪ್ರಕರಣಗಳೂ ಅಧಿಕವಾಗಿದು ಇದು ಶಿಪ್ಪಿಂಗ್ ಕಂಪೆನಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಸೂಯೆಜ್ ಕಾಲುವೆಯಲ್ಲಿ ಪ್ರಸ್ತುತ ಒಟ್ಟು 12 ಮಿಲಿಯನ್ ಟನ್ ಸರಕು (1 ಟನ್ ಅಂದರೆ ಸಾವಿರ ಕೆಜಿ). ಒಟ್ಟು ಸಾವಿರ ಕೇಜಿಯನ್ನು 1.2 ಕೋಟಿಯಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ ಅಷ್ಟು ಸರಕು ಸಿಕ್ಕಿಹಾಕಿಕೊಂಡಿದೆ. ಆ ಪೈಕಿ ಶೇ 34.1ರಷ್ಟು ಕಂಟೇನರ್ಗಳು, ಶೇ 24.6 ಕಚ್ಚಾ ತೈಲ, ಶೇ 6.4ರಷ್ಟು ಸ್ವಚ್ಛ ಪೆಟ್ರೋಲಿಯಂ ಉತ್ಪನ್ನಗಳು, ಧಾನ್ಯಗಳು ಶೇ 6.1, ಕಲ್ಲಿದ್ದಲು ಶೇ 6, ಎಲ್ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಶೇ 3.1, ಎಲ್ಎನ್ಜಿ (ಲಿಕ್ವಿಡ್ ನ್ಯಾಚುರಲ್ ಗ್ಯಾಸ್) ಶೇ 2.9, ಕಬ್ಬಿಣ ಶೇ 6.7, ಗೊಬ್ಬರ ಶೇ 5.2, ಇತರ ಶೇ 2.7 ಮತ್ತು ವಾಹನಗಳು ಶೇ 2.2ರಷ್ಟಿದೆ.