ಯಾಂಗೊನ್, ಮಾ.28 (DaijiworldNews/HR): ಮಿಲಿಟರಿ ಆಡಳಿತವನ್ನು ವಿರೋಧಿಸಿ ಮ್ಯಾನ್ಮಾರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ 114 ನಾಗರಿಕರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎನ್ನಲಾಗಿದೆ.
ಶಾಂತಿಯುತವಾಗಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ಮೇಲೆ ಮ್ಯಾನ್ಮಾರ್ ಸೇನೆಯು ಗುಂಡಿನ ದಾಳಿ ನಡೆಸಿದ್ದು, ಮ್ಯಾನ್ಮಾರ್ ಸಶಸ್ತ್ರ ಪಡೆಯ ದಿನದಂದೇ ಇಂತಹದೊಂದು ಹೀನಾಯ ಕೃತ್ಯ ಎಸಗಿದೆ.
ಮೃತಪಟ್ಟಪಟ್ಟವರ ಪೈಕಿ ಮಕ್ಕಳೂ ಸೇರಿದ್ದು, ಯಾಂಗೊನ್ನಲ್ಲಿ 27 ಮಂದಿಯನ್ನು ಹತ್ಯೆಗೈಯಲಾಗಿದೆ. 13 ವರ್ಷದ ಬಾಲಕಿಯು ಇದರಲ್ಲಿ ಸೇರಿದ್ದಾಳೆ ಎನ್ನಲಾಗಿದೆ.
ಇನ್ನು ಮ್ಯಾನ್ಮಾರ್ ಉತ್ತರದಲ್ಲಿರುವ ಕಾಚಿನ್ ಪ್ರದೇಶದಿಂದ ದಕ್ಷಿಣದ ಅಂಡಮಾನ್ ಸಮುದ್ರದ ವರೆಗೂ ನಾಗರಿಕರನ್ನು ಹತ್ಯೆಗೈಯಲಾಗಿದ್ದು, ಇದುವರೆಗೆ ಪ್ರತಿಭಟನೆಯಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ 440ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.