ಢಾಕಾ, ಮಾ.28 (DaijiworldNews/MB) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಢಾಕಾಗೆ ಭೇಟಿ ನೀಡಿರುವುದನ್ನು ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆ ಈಗಾಗಲೇ ಹಿಂಸಾಚಾರಕ್ಕೆ ತಿರುಗಿದೆ. ಈ ಹಿಂಸಾಚಾರ ಮೋದಿ ನಿರ್ಗಮನದ ಬಳಿಕ ಮತ್ತಷ್ಟು ತೀವ್ರ ಸ್ಥಿತಿಗೆ ತಲುಪಿದ್ದು ಈವರೆಗೆ ನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಬಾಂಗ್ಲಾದೇಶದ 50 ನೇ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಲು ನರೇಂದ್ರ ಮೋದಿ ಢಾಕಾಕ್ಕೆ ಆಗಮಿಸಿದ್ದು ಬಾಂಗ್ಲಾದ ಕೆಲವು ಗುಂಪು ಮೋದಿ ಭೇಟಿಯನ್ನು ವಿರೋಧಿಸಿತ್ತು. ಹಾಗೆಯೇ ಮೋದಿಗೆ ಆಹ್ವಾನ ನೀಡಿದ ಪ್ರಧಾನಿ ಶೇಖ್ ಹಸೀನಾ ಅವರನ್ನೂ ಟೀಕೆ ಮಾಡಿತ್ತು.
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಮೋದಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಸ್ಲಾಮಿಕ್ ಗುಂಪುಗಳು ಶುಕ್ರವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದು ಹಿಂಸಾರೂಪ ಪಡೆದ ಪ್ರತಿಭಟನೆಯಲ್ಲಿ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದರು.
ಮರುದಿನ ಇಸ್ಲಾಮಿಕ್ ಗುಂಪಿನ ಕಾರ್ಯಕರ್ತರು ಚಿತ್ತಗಾಂಗ್ ಮತ್ತು ಡಾಕಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಭಾನುವಾರ, ಹೆಫಜತ್-ಎ-ಇಸ್ಲಾಂ ಗುಂಪಿನ ಕಾರ್ಯಕರ್ತರು ಪೂರ್ವ ಬಾಂಗ್ಲಾದೇಶದ ಜಿಲ್ಲೆ ಬ್ರಹ್ಮನ್ಬರಿಯಾದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬ್ರಹ್ಮನ್ಬರಿಯಾ ಪಟ್ಟಣದ ಪತ್ರಕರ್ತ ಜಾವೇದ್ ರಹೀಮ್, ''ಎಲ್ಲೆಡೆ ಬೆಂಕಿ ಹಾಕಲಾಗುತ್ತಿದೆ. ಪ್ರೆಸ್ ಕ್ಲಬ್ನ ಮೇಲೂ ದಾಳಿ ನಡೆದಿದೆ. ಪಟ್ಟಣದ ಹಲವಾರು ಹಿಂದೂ ದೇವಾಲಯಗಳ ಮೇಲೂ ದಾಳಿ ನಡೆಸಲಾಗಿದೆ. ನಾವು ಅಸಹಯಕರಾಗಿದ್ದೇವೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.