ವಾಷಿಂಗ್ಟನ್, ಮಾ.31 (DaijiworldNews/MB) : ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು ಸಹಿಸಿಕೊಳ್ಳುವುದು, ಕಾನೂನುಬಾಹಿರ ಹಾಗೂ ಅನಿಯಂತ್ರಿತ ಹತ್ಯೆಗಳು ಮತ್ತು ಭ್ರಷ್ಟಾಚಾರ ಸೇರಿದಂತೆ ಭಾರತದಲ್ಲಿ ಹಲವು ಮಾನವ ಹಕ್ಕುಗಳ ಸಮಸ್ಯೆಗಳಿವೆ ಎಂದು ಅಮೇರಿಕಾ ಸರ್ಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೇರಿಕಾ ಸರ್ಕಾರ 2020 ಮಾನವ ಹಕ್ಕುಗಳ ಪದ್ಧತಿಗಳ ದೇಶದ ವರದಿಗಳಲ್ಲಿ ಪ್ರಮುಖವಾಗಿ ಭಾರತದ ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಸುಧಾರಿಸುತ್ತಿದೆ ಎಂದಿದೆ. ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಸಹಜತೆಯನ್ನು ತರುವ ನಿಟ್ಟಿನಲ್ಲಿ ಕೆಲವು ಭದ್ರತೆ ಮತ್ತು ಸಂವಹನ ನಿರ್ಬಂಧಗಳನ್ನು ತೆಗೆದುಹಾಕುತ್ತಿದೆ. ರಾಜಕೀಯ ಕಾರ್ಯಕರ್ತರನ್ನು ಕೂಡಾ ಗೃಹ ಬಂಧನದಿಂದ ಮುಕ್ತ ಮಾಡಿದೆ. ಈಗ ಇಟರ್ನೆಟ್ ಸೌಲಭ್ಯ ಮರುಸ್ಥಾಪಿಸಲಾಗಿದೆ. ಅತಿ ವೇಗದ 4ಜಿ ಮೊಬೈಲ್ ಸಂಪರ್ಕ ಮಾತ್ರ ಜಮ್ಮು-ಕಾಶ್ಮೀರದ ಬಹುತೇಕ ಭಾಗಗಳಲ್ಲಿ ನಿರ್ಬಂಧಿಸಲಾಗಿದೆ ಎಂದು ವರದಿ ಮಾಡಿದೆ.
ಇನ್ನು ಈ ವರದಿಯಲ್ಲಿ ಭಾರತದಲ್ಲಿನ 12ಕ್ಕೂ ಅಧಿಕ ಮಹತ್ವದ ಮಾನವ ಹಕ್ಕುಗಳ ಸಮಸ್ಯೆಗಳನ್ನು ಪಟ್ಟಿ ಮಾಡಿದೆ. ಪೊಲೀಸರು ಮಾಡಿದ ಕಾನೂನು ಬಾಹಿರ ಹತ್ಯೆ ಸೇರಿದಂತೆ ಬೇರೆ ಕಾನೂನುಬಾಹಿರ ಮತ್ತು ಅನಿಯಂತ್ರಿತ ಹತ್ಯೆಗಳು, ಜೈಲು, ಪೊಲೀಸ್ ಠಾಣೆಯಲ್ಲಿ ಅಮಾನವೀಯ ಹಿಂಸಾಚಾರ, ಸರ್ಕಾರಿ ಅಧಿಕಾರಿಗಳಿಂದ ಅನಿಯಂತ್ರಿತ ಬಂಧನ, ನಾಗರಿಕರ ಹತ್ಯೆ, ಬಾಲ ಸೈನಿಕರ ನೇಮಕಾತಿ ಮತ್ತು ಬಳಕೆ ಸೇರಿದಂತೆ ಹಲವು ಸಮಸ್ಯೆಗಳು ಈ ಪಟ್ಟಿಯಲ್ಲಿ ಪ್ರಮುಖವಾಗಿದೆ.
ಇನ್ನು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ಪ್ರತ್ಯೇಕತಾವಾದಿ ದಂಗೆಕೋರರು ಮತ್ತು ಭಯೋತ್ಪಾದಕರು ನಡೆಸುವ ಹತ್ಯೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಇನ್ನು ಈ ಹಿಂದೆ ಅಮೇರಿಕಾ ಸರ್ಕಾರ ನೀಡಿದ್ದ ಇದೇ ರೀತಿಯ ವರದಿಗಳನ್ನು ಭಾರತ ಸರ್ಕಾರ ತಿರಸ್ಕಾರ ಮಾಡಿತ್ತು.