ಜಕಾರ್ತಾ, ಎ.04 (DaijiworldNews/PY): "ಸರಕು ಸಾಗಣೆ ಹಾಗೂ ಮೀನುಗಾರಿಕೆ ದೋಣಿಯ ನಡುವೆ ಢಿಕ್ಕಿಯಾದ ಪರಿಣಾಮ 17ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವ ಘಟನೆ ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ನಡೆದಿದೆ" ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಶನಿವಾರ ತಡರಾತ್ರಿ ಇಂದ್ರಮಾಯು ಜಿಲ್ಲೆಯಲ್ಲಿಇಂಡೋನೇಷ್ಯಾದ ಎಂವಿ ಪಯೋನೀರ್ ಸರಕು ಸಾಗಣೆ ಹಡಗಿಗೆ ಮೀನುಗಾರಿಕೆ ದೋಣಿ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ಪರಿಣಾಮ ದೋಣಿ ನೀರಿನಲ್ಲಿ ಮುಳುಗಿದೆ. ದೋಣಿಯಲ್ಲಿ ಒಟ್ಟು 32 ಮಂದಿ ಇದ್ದರು" ಎಂದು ಶೋಧ ಹಾಗೂ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡೆಡೇನ್ ರಿದ್ವಾನ್ಶು ಹೇಳಿದ್ದಾರೆ.
"ದೋಣಿ ಢಿಕ್ಕಿಯಾದ ಸಂದರ್ಭ ದೋಣಿಯಲ್ಲಿ ಸಿಲುಕಿದ್ದ 15 ಜನರನ್ನು ಸ್ದಳೀಯ ಮೀನುಗಾರರು ಹಾಗೂ ನೌಕಾಪಡೆ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಇನ್ನುಳಿದವರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ" ಎಂದು ಸಮುದ್ರ ಸಾರಿಗೆ ನಿರ್ದೇಶನಾಲಯದ ವಕ್ತಾರ ವಿಷ್ಣುವರ್ಧನ ತಿಳಿಸಿದ್ದಾರೆ.
"ಬೊರ್ನಿಯೊ ದ್ವೀಪದಿಂದ ಕಚ್ಚಾ ತೈಲವನ್ನು ತರುತ್ತಿದ್ದ ಸರಕು ಸಾಗಣೆ ಹಡಗು, ಮೀನುಗಾರರ ಬಲೆಗೆ ಸಿಲುಕಿದ್ದು, ಇದರಿಂದ ಹೊರಬರಲು ಯತ್ನಿಸುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ" ಎಂದು ಡೆಡೇನ್ ರಿದ್ವಾನ್ಶು ಹೇಳಿದ್ದಾರೆ.