ಅಮೇರಿಕಾ, ಎ.05 (DaijiworldNews/PY): ಭಾರತದ ಇಂಜಿನಿಯರ್ ಓರ್ವನನ್ನು ಅಮೇರಿಕಾದ ಎಸ್.ಟಿ.ಲೂಯಿಸ್ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತನ ಪೋಷಕರು ಮಧ್ಯಪ್ರದೇಶದ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶರೀಫ್ ರೆಹಮಾನ್ (30) ಮೃತಪಟ್ಟ ಯುವಕ.
"ಶರೀಫ್ ರೆಹಮಾನ್ ಇಂಜಿನಿಯರ್ ಆಗಿದ್ದು, ಕಳೆದ ಆರು ವರ್ಷಗಳಿಂದ ಉದ್ಯೋಗದ ನಿಮಿತ್ತ ಅಮೇರಿಕಾದಲ್ಲಿ ನೆಲೆಸಿದ್ದ" ಎಂದು ಮಧ್ಯಪ್ರದೇಶದ ಸುಭಾಷ್ನಗರದಲ್ಲಿರುವ ಆತನ ಪೋಷಕರು ಹೇಳಿದ್ದಾರೆ.
"ನನ್ನ ಸಹೋದರ ಸರಳ ಹಾಗೂ ಉತ್ತಮ ವ್ಯಕ್ತಿಯಾಗಿದ್ದು, ಸಹಾಯ ಮಾಡುತ್ತಿದ್ದ. ಅವನು ಕೊಲೆಯಾಗಿದ್ದಾನೆ ಎಂದರೆ ನಮಗೆ ನೋವಾಗುತ್ತಿದೆ" ಮೃತನ ಸೋದರ ಮುಜೀಬ್ ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ.
"ಆತ ಕಳೆದ ಆರು ತಿಂಗಳ ಹಿಂದೆ ಸ್ವದೇಶಕ್ಕೆ ಬಂದಿದ್ದ. ಈ ರೀತಿಯಾಗಿ ಹತ್ಯೆ ಆಗುತ್ತಾನೆ ಎಂದಿದ್ದರೆ ನಾವು ಅವನನ್ನು ಅಮೇರಿಕಾಕ್ಕೆ ಕಳುಹಿಸುತ್ತಿರಲಿಲ್ಲ" ಎಂದು ಕುಟುಂಬಸ್ಥರು ನೋವಿನಿಂದ ನುಡಿದಿದ್ದಾರೆ.
"ನನ್ನ ಸಹೋದರನನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ನಮಗೆ ಒಪ್ಪಿಸಿ. ಸಾಯಿಸುವುದು ಹೇಗೆ ಎಂದು ನಾವು ತೋರಿಸಿಕೊಡುತ್ತೇವೆ. ಆರೋಪಿಯನ್ನು ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಿ" ಎಂದು ಮುಜೀಬ್ ಹೇಳಿದ್ದಾರೆ.
ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚವ್ಹಾಣ್ ಅವರು, "ಸರ್ಕಾರ ಎಂದಿಗೂ ನಿಮ್ಮ ಬೆಂಬಲಕ್ಕೆ ಇದ್ದು, ಯಾವುದೇ ರೀತಿಯ ಸಹಾಯ ಮಾಡಲಿದೆ" ಎಂದು ಭರವಸೆ ನೀಡಿದ್ದಾರೆ.