ರಿಯಾದ್, ಎ.06 (DaijiworldNews/MB) : ಕೊರೊನಾ ಲಸಿಕೆ ಹಾಕಿಸಿಕೊಂಡವರು ಹಾಗೂ ಪ್ರತಿಕಾಯಗಳನ್ನು ಹೊಂದಿರುವವರಿಗೆ ಮಾತ್ರ ಮೆಕ್ಕಾ, ಮದಿನಾ ಸೇರಿ ಪವಿತ್ರ ಕ್ಷೇತ್ರಗಳ ಯಾತ್ರೆಗೆ ಅವಕಾಶ ನೀಡುತ್ತೇವೆ ಎಂದು ಸೌದಿ ಅರೇಬಿಯಾ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ, ಕೊರೊನಾ ಲಸಿಕೆಯ ಎರಡು ಡೋಸ್ಗಳನ್ನು ಈಗಾಗಲೇ ಪಡೆದಿರುವವರು, ಮೊದಲ ಡೋಸ್ ಪಡೆದು ಕನಿಷ್ಠ 14 ದಿನ ಕಳೆದಿರುವವರು ಈಗಾಗಲೇ ಕೊರೊನಾ ಸೋಂಕು ದೃಢಪಟ್ಟು ಗುಣಮುಖರಾಗಿರುವವರನ್ನು ಪ್ರತಿಕಾಯಗಳನ್ನು ಹೊಂದಿದವರು ಎಂದು ಪರಿಗಣನೆ ಮಾಡಲಾಗುವುದು. ಇವರಿಗೆ ಈ ಪವಿತ್ರ ರಂಜಾನ್ ತಿಂಗಳಿನಲ್ಲಿ ಆರಂಭವಾಗುವ ಮೆಕ್ಕಾ, ಮದಿನಾ ಯಾತ್ರೆಗೆ ಅವಕಾಶ ನೀಡಲಾಗುವುದು. ಹಾಗೆಯೇ ಈ ನಿಯಮ ರಂಜಾನ್ ತಿಂಗಳ ಆರಂಭದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಇನ್ನು ಈ ನಿಯಮವು ಎಲ್ಲಿಯವರೆಗೆ ಜಾರಿಯಲ್ಲಿ ಇರಲಿದೆ ಹಾಗೂ ವರ್ಷದ ಕೊನೆಯ ಹಜ್ ಯಾತ್ರೆಗೂ ಇದು ಅನ್ವಯವಾಗಲಿದೆಯೇ ಎಂಬುದನ್ನು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಖಚಿತಪಡಿಸಿಲ್ಲ.
ಸೌದಿ ಅರೇಬಿಯಾದಲ್ಲಿ 3,93,000ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು 6,700 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ನಡುವೆ ಸರ್ಕಾರ 50 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಿದೆ.