ಕೋಲಂಬೋ, ಎ.08 (DaijiworldNews/PY): ಶ್ರೀಲಂಕಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವೇದಿಕೆ ಮೇಲೆ ವಿಜೇತೆಯ ತಲೆಗೆ ಧರಿಸಿದ್ದ ಕಿರೀಟವನ್ನು ಕಸಿದುಕೊಂಡಿರುವ ಘಟನೆ ನಡೆದಿದೆ.
ಶ್ರೀಲಂಕಾದಲ್ಲಿ ಮಿಸೆಸ್ ಶ್ರೀಲಂಕಾ 2021 ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದ್ದು, ಈ ಸಂದರ್ಭ ಪುಷ್ಪಿಕ ಡೆ ಸಿಲ್ವಾ ಮಿಸೆಸ್ ಇಂಡಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಕೆಲವೇ ಕ್ಷಣದಲ್ಲಿ 2019ರ ಶ್ರೀಲಂಕಾ ವಿಜೇತೆ ಕ್ಯಾರೋಲಿನ್ ಜೂರಿ, ಈಕೆ ವಿಚ್ಛೇದಿತ ಮಹಿಳೆ. ಈಕೆಗೆ ಈ ಪ್ರಶಸ್ತಿ ಸಲ್ಲಬಾರದು ಎಂದು ಕಿರೀಟವನ್ನು ಕಿತ್ತುಕೊಂಡಿದ್ದಾರೆ.
ಪುಷ್ಪಿಕಾ ಡಿ ಸಿಲ್ವಾ ಅವರು ಕೂಡಲೇ ಸ್ಥಳದಿಂದ ಹೊರಟು ಹೋದರು. ತಲೆಯ ಮೇಲಿದ್ದ ಕಿರೀಟವನ್ನು ತೆಗೆದ ಸಂದರ್ಭ ತಮ್ಮ ತಲೆಗೆ ಪೆಟ್ಟಾಗಿದೆ ಎಂದು ಪುಷ್ಪಿಕಾ ಡಿ ಸಿಲ್ವಾ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದಾದ ಬಳಿಕ ಸ್ಪರ್ಧೆಯ ಆಯೋಜಕರು ಪ್ರತಿಕ್ರಿಯೆ ನೀಡಿದ್ದು, "ಪುಷ್ಪಿಕಾ ವಿಚ್ಛೇದಿತ ಮಹಿಳೆಯಲ್ಲ. ಹಾಗಾಗಿ ಅವರ ಕಿರೀಟವನ್ನು ಹಿಂದಿರುಗಿಸಬೇಕು" ಎಂದು ತಿಳಿಸಿದ್ದರು.
ಬಳಿಕ ವಿಜೇತ ಕಿರೀಟವನ್ನು ಪುಷ್ಪಿಕಾ ಡಿ ಸಿಲ್ವಾ ಅವರಿಗೆ ಮರಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಷ್ಪಿಕಾ, "ನಾನು ಈ ಪ್ರಶಸ್ತಿಯನ್ನು ಸಿಂಗಲ್ ಮದರ್ಗಳಿಗೆ ಅರ್ಪಿಸುತ್ತೇನೆ. ಶ್ರೀಲಂಕಾದಲ್ಲಿ ನನ್ನಂತೆ ಹಲವಾರು ಒಂಟಿ ಮಹಿಳೆಯರು ಕಷ್ಟಪಡುತ್ತಿದ್ದಾರೆ. ಈ ಕಿರೀಟವನ್ನು ಅವರಿಗೆ ಸಮರ್ಪಿಸುತ್ತಿದ್ದೇನೆ" ಎಂದಿದ್ದಾರೆ.