ಮುಂಬೈ, ಏ. 09 (DaijiworldNews/HR): ಭಾರತೀಯ ಮೂಲದ ದಂಪತಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ದಂಪತಿಯ ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗಳು ಅಳುವುದನ್ನು ನೋಡಿ ನೆರೆಮನೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಮೃತರನ್ನು ಬಾಲಾಜಿ ಭಾರತ್ ರುದ್ರಾವರ್ (32) ಮತ್ತು ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಎಂದು ಗುರುತಿಸಲಾಗಿದ್ದು, ದಂಪತಿಯ ಮೃತದೇಹ ಚಾಕು ಇರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮನೆಯ ಬಾಲ್ಕನಿಯಲ್ಲಿ ಮಗು ಅಳುವುದನ್ನು ನೋಡಿದ ನೆರೆಮನೆಯವರು ಮನೆಯೊಳಗೆ ಹೋಗಿ ನೋಡಿದಾಗ ಲಿವಿಂಗ್ ರೂಮ್ನಲ್ಲಿ ದಂಪತಿ ಸತ್ತು ಬಿದ್ದಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾವು ಹೇಗೆ ಸಂಭವಿಸಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನು ನನ್ನ ಸೊಸೆ 7 ತಿಂಗಳ ಗರ್ಭಿಣಿ ಆಗಿದ್ದಳು. ನಾವು ಮತ್ತೊಮ್ಮೆ ಅಮೇರಿಕ ಪ್ರವಾಸ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು. ಅಷ್ಟರಲ್ಲಿ ಮಗ ಮತ್ತು ಸೊಸೆ ಮೃತಪಟ್ಟಿದ್ದಾರೆ. ಇಬ್ಬರು ಖುಷಿಯಾಗಿಯೇ ಇದ್ದರು ನೆರೆಮನೆಯವರೊಂದಿಗೂ ಚೆನ್ನಾಗಿಯೇ ಇದ್ದರು. ಆದರೆ, ಯಾಕೆ ಹೀಗಾಯಿತು ಎಂಬುದು ನಮಗೂ ತಿಳಿಯುತ್ತಿಲ್ಲ. ಇಬ್ಬರ ಮೃತದೇಹ ತಲುಪಲು ಸುಮಾರು 8 ರಿಂದ 10 ದಿನಗಳು ಆಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದು, ನನ್ನ ಮೊಮ್ಮಗಳು ಸದ್ಯ ನನ್ನ ಮಗನ ಸ್ನೇಹಿತನ ಮನೆಯಲ್ಲಿದ್ದಾಳೆ ಎಂದು ಮೃತನ ತಂದೆ ಮಾಹಿತಿ ನೀಡಿದ್ದಾರೆ.
ಬಾಲಾಜಿ ರುದ್ರಾವರ್ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈ ನಿವಾಸಿಯಾಗಿದ್ದು, ಐಟಿ ವೃತ್ತಿಪರನಾಗಿದ್ದ ಬಾಲಾಜಿ 2014ರ ಡಿಸೆಂಬರ್ನಲ್ಲಿ ಮದುವೆ ಆದ ಬಳಿಕ 2015ರಲ್ಲಿ ಪತ್ನಿ ಜತೆ ಕೆಲಸಕ್ಕೆಂದು ಅಮೆರಿಕಕ್ಕೆ ತೆರಳಿದ್ದರು.