ಬ್ರೆಜಿಲ್, ಏ 9(DaijiworldNews/MS): ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಕೊರೊನಾ ಸೋಂಕಿಗೆ ತುತ್ತಾಗಿ ಪರಿಸ್ಥಿತಿ ಗಂಭೀರವಾದರೆ, ಪ್ರೀತಿಪಾತ್ರರಿಂದ ದೂರವಾಗಿ ಪ್ರತ್ಯೇಕವಾಗಿ ವೈರಸ್ ವಿರುದ್ಧ ಹೋರಾಡುವವರ ಮಾನಸಿಕ ಪರಿಸ್ಥಿತಿ ವಿವರಿಸಲು ಅಸಾಧ್ಯ.
ಸೋಂಕಿಗೆ ತುತ್ತಾಗಿ ಐಸಿಯುವಿನಲ್ಲಿ ರೋಗದ ವಿರುದ್ದ ಹೋರಾಡುತ್ತಿರುವ ಒಬ್ಬ ರೋಗಿಗೆ ಸಾಂತ್ವನ ನೀಡಲು, ಬ್ರೆಜಿಲ್ನ ದಾದಿಯರು ಮಾಡಿದ ಚತುರ ಉಪಾಯ ಈಗ ಜಗತ್ತಿನಾದ್ಯಂತ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆಗೊಳಗಾಗಿದೆ.
ಏಕಾಂಕಿಯಾಗಿದ್ದ ಸೋಂಕಿತ ರೋಗಿಗೆ ಮಾನವ ಸ್ಪರ್ಶದ ಆತ್ಮೀಯತೆಯನ್ನು ಹೋಲುವಂತೆ, ಎರಡು ಗ್ಲೌಸ್ ಗೆ ಬಿಸಿನೀರು ತುಂಬಿ ರೋಗಿಯ ಕೈಯನ್ನು ಅದರ ಮಧ್ಯೆ ಇರಿಸಿದ್ದಾರೆ. ಈ ಚಿತ್ರವು ನೆಟ್ಟಿಗರನ್ನು ಭಾವುಕರನ್ನಾಗಿ ಮಾಡಿದೆ.
ಪತ್ರಕರ್ತ ಸಾದಿಕ್ ‘ಸಮೀರ್’ ಭಟ್ ಈ ಹೃದಯಸ್ಪರ್ಶಿ ಪೋಟೋ ಹಂಚಿಕೊಂಡಿದ್ದು " ದೇವರ ಕೈ ’- ಬ್ರೆಜಿಲಿನ ಕೋವಿಡ್ ವಾರ್ಡ್ನಲ್ಲಿ ಐಷೋಲೇಶನ್ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಾಂತ್ವನ ನೀಡಲು ಪ್ರಯತ್ನಿಸುತ್ತಿರುವ ದಾದಿಯರು. ಬಳಸಿ ಬಿಸಾಡುವ ಎರಡು ಕೈಗವಸುಗಳಿಗೆ ಬಿಸಿನೀರು ತುಂಬಿಕಟ್ಟಲಾಗಿದೆ, ನಮ್ಮ ಜಗತ್ತು ಇಂದು ಇರುವ ಭೀಕರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನೆನಪಿಸುತ್ತದೆ! ” #MaskUp ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಬರೆದ ಅವರ ಪೋಸ್ಟ್ ವೈರಲ್ ಆಗಿದ್ದು ದಾದಿಯರ ಉಪಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.