ಫ್ಲಾರಿಡಾ, ಎ.10 (DaijiworldNews/MB) : ಕಳೆದ ವರ್ಷ ಜೂನ್ನಲ್ಲಿ, ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗಿದ್ದ ಸಂದರ್ಭ ಅಮೇರಿಕಾದ ಫ್ಲಾರಿಡಾದ ಜಾಕ್ಸನ್ವಿಲ್ಲೆಯಲ್ಲಿರುವ ಅಂಗಡಿಯಲ್ಲಿ ಮಹಿಳೆಯೊಬ್ಬರು ಜಗಳ ಮಾಡುತ್ತಿದ್ದುದ್ದನ್ನು ವಿಡಿಯೋ ಮಾಡುತ್ತಿದ್ದ ವ್ಯಾಪಾರಿಯೋರ್ವರ ಬಳಿಗೆ ಹೋಗಿ ಉದ್ದೇಶಪೂರ್ವಕವಾಗಿ ಕೆಮ್ಮಿದ ಕಾರಣಕ್ಕೆ ಮಹಿಳೆಗೆ 30 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಗೊಳಗಾದ ಮಹಿಳೆ 53 ವರ್ಷದ ಡೆಬ್ರಾ ಹಂಟರ್ ಅಂಗಡಿಯೊಂದರಲ್ಲಿ ಉದ್ಯೋಗಿಗಳೊಂದಿಗೆ ಜಗಳ ಮಾಡುತ್ತಿದ್ದ ಸಂದರ್ಭ ಹೆದರ್ ಸ್ಪ್ರಾಗ್ ಎಂಬ ವ್ಯಾಪಾರಿ ವಿಡಿಯೋ ಮಾಡಿದ್ದು ಈ ಸಂದರ್ಭ ಹಂಟರ್ ಆ ವ್ಯಾಪಾರಿಯ ಬಳಿಗೆ ಹೋಗಿ ಉದ್ದೇಶಪೂರ್ವಕವಾಗಿ ಕೆಮ್ಮಿ ಕೊರೊನಾ ಕಾಲದಲ್ಲಿ ದುಷ್ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
''10 ತಿಂಗಳ ಹಿಂದೆ ಮೆದುಳಿನ ಗೆಡ್ಡೆ ತೆಗೆಯುವ ಶಸ್ತ್ರ ಚಿಕಿತ್ಸೆಗೆ ನಾನು ಒಳಗಾಗಿದ್ದು ಈಗಲೂ ಚಿಕಿತ್ಸೆ ಮುಂದುವರೆದಿದೆ. ದೈಹಿಕವಾಗಿ ದುರ್ಬಲವಾಗಿರುವ ನನ್ನ ಮೇಲೆ ಹಂಟರ್ ಕೆಮ್ಮುವ ಮೂಲಕ ಕೊರೊನಾ ಭೀತಿ ಮೂಡಿಸಿದ್ದಾರೆ'' ಎಂದು ಮಹಿಳೆ ಹಂಟರ್ ವಿರುದ್ದ ವ್ಯಾಪಾರಿ ಮಹಿಳೆ ಸ್ಪ್ರಾಗ್ ನ್ಯಾಯಾಲಯದಲ್ಲಿ ದೂರಿದ್ದಾರೆ.
ಇನ್ನು ಹಂಟರ್, ''ನಾನು ನಿನ್ನ ಬಳಿಗೆ ಬಂದು ನಿನ್ನ ಮುಖದ ಮೇಲೆ ಕೆಮ್ಮುತ್ತೇನೆ, ಆಗ ಹೇಗಿರುತ್ತೆ ನೋಡು'' ಎಂದು ಹೇಳಿರುವುದು ಹೆದರ್ ಸ್ಪ್ರಾಗ್ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಹಾಗೆಯೇ ಹಂಟರ್ ಈ ವ್ಯಾಪಾರಿ ಮಹಿಳೆಯ ಬಳಿಗೆ ಬಂದು ವಿಡಿಯೋ ರೆಕಾರ್ಡ್ ನೀಡುವಂತೆ ಕೇಳಿದ್ದು ಸ್ಪ್ರಾಗ್ ನಿರಾಕರಿಸಿದಾಗ, ಮುಖದ ಬಳಿ ಬಂದು ಕೆಮ್ಮಿದ್ದಾಳೆ ಎಂದು ವರದಿಯಾಗಿದೆ.
''ನಾನು ಈ ವೇಳೆ ಮಾಸ್ಕ್ ಧರಿಸಿದ್ದೆ, ಅವರ ಉಗುಳು ನನ್ನ ಮುಖಕ್ಕೆ ಬಿದ್ದಿದೆ. ಆ ಸಂದರ್ಭ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗಿತ್ತು. ನಾನು ಅದರಿಂದಾಗಿ ಆತಂಕಕ್ಕೆ ಒಳಗಾಗಿದ್ದೆ. ಮಾನಸಿಕವಾಗಿ ಕುಗ್ಗಿ ಹೋದೆ. ನನಗೆ ಸೋಂಕು ಬಂದಿರಬಹುದೆ ಎಂದು ನಾನು ಆತಂಕಪಟ್ಟೆ'' ಎಂದು ಕೂಡಾ ಹೆದರ್ ಸ್ಪ್ರಾಗ್ ಆರೋಪಿಸಿದ್ದಾರೆ.