ರೆನ್ನೆಸ್, ಏ.12 (DaijiworldNews/MB) : ಪಶ್ಚಿಮ ಫ್ರಾನ್ಸ್ನ ಮಸೀದಿಯ ಗೋಡೆಯೊಂದರಲ್ಲಿ ದುಷ್ಕರ್ಮಿಗಳು ಇಸ್ಲಾಂ ವಿರೋಧಿ ಬರಹ ಬರೆದಿದ್ದು, ಚಿತ್ರಗಳನ್ನು ಕೂಡಾ ರಚಿಸಿದ್ದರು ಎಂದು ವರದಿಯಾಗಿದೆ.
ಭಾನುವಾರ ಬೆಳಿಗ್ಗೆ ಮಸೀದಿ ಮತ್ತು ಇಸ್ಲಾಮಿಕ್ ಕಲ್ಚರಲ್ ಸೆಂಟರ್ಗೆ ಬಂದಿದ್ದ ಸ್ಥಳೀಯ ಮುಸ್ಲಿಮರು ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ ಹಾಗೂ ಚಿತ್ರಗಳು ಇರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಂಜಾನ್ ತಿಂಗಳು ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ಈ ಕೃತ್ಯ ನಡೆದಿದೆ. ಈ ಬಗ್ಗೆ ಸ್ಥಳೀಯಾಡಳಿತ ತನಿಖೆಯನ್ನು ಕೈಗೆತ್ತಿಕೊಂಡಿದೆ. ಹಾಗೆಯೇ ಮಸೀದಿ ಗೋಡೆಯಲ್ಲಿದ್ದ ಬರಹ ಮತ್ತು ಚಿತ್ರಕ್ಕೆ ಸುಣ್ಣ ಬಳಿಯುವ ಮೂಲಕ ಅಳಿಸಿದ್ದಾರೆ.
ಇನ್ನು ಈ ಕೃತ್ಯವನ್ನು ಆಂತರಿಕ ಸಚಿವ ಜೆರಾಲ್ಡ್ ಡಮೇನಿನ್, ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರು ಖಂಡಿಸಿದ್ದಾರೆ.
ಗೋಡೆಗಳಲ್ಲಿ ಇಸ್ಲಾಂ ಧರ್ಮ ಹಾಗೂ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಬರಹಗಳು ಕಂಡು ಬಂದಿದೆ ಎನ್ನಲಾಗಿದೆ.