ನವದೆಹಲಿ, ಏ.13 (DaijiworldNews/MB) : ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಬಾಂಗ್ಲಾದೇಶ ಸರ್ಕಾರವು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ತಾತ್ಕಾಲಿಕವಾಗಿ ಒಂದು ವಾರಗಳ ಕಾಲ ಸ್ಥಗಿತಗೊಳಿಸಿದೆ.
ಏಪ್ರಿಲ್ 14 ರಿಂದ 20 ರವರೆಗೆ ಬಾಂಗ್ಲಾದೇಶಕ್ಕೆ ಬರುವ ಹಾಗೂ ಹೊರಗೆ ಹೋಗುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಬಿ) ತಿಳಿಸಿರುವುದಾಗಿ ಡಿಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿಷೇಧದಿಂದಾಗಿ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದಾಗಲಿದೆ ಎಂದು ಸಿಎಎಬಿಯ ಏರ್ ವೈಸ್ ಮಾರ್ಷಲ್ ಎಂ ಮಾಫಿದೂರ್ ರಹಮಾನ್ ತಿಳಿಸಿದ್ದು ಪ್ರಸ್ತುತ ಬಾಂಗ್ಲಾದೇಶದ ವಿಮಾನ ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 70 ರಿಂದ 75 ವಿಮಾನಗಳನ್ನು ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದೂ ತಿಳಿಸಿದ್ದಾರೆ.
ದೇಶೀಯ ಪ್ರಯಾಣಿಕರ ವಿಮಾನಗಳು, ಚಾರ್ಟರ್ಡ್ ಹೆಲಿಕಾಪ್ಟರ್ ವಿಮಾನಗಳು ಕೂಡಾ ಅಮಾನತುಗೊಳ್ಳಲಿದ್ದು ಕೆಲವು ವೈದ್ಯಕೀಯ, ಮಾನವೀಯ ವಿಚಾರಗಳಿಗೆ ಹಾಗೂ ಸರಕು ಹಾರಾಟಕ್ಕೆ ವಿನಾಯಿತಿಗಳನ್ನು ನೀಡಬಹುದು ಎಂದು ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಅಧಿಕಾರಿಗಳು ಏಪ್ರಿಲ್ 3 ರಂದು ಯುರೋಪ್ ಮತ್ತು ಇತರ 12 ದೇಶಗಳ ವಿಮಾನ ಪ್ರಯಾಣಿಕರಿಗೆ ನಿಷೇಧ ಹೇರಿದ್ದರು. ಹಾಗೆಯೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 5 ರಂದು ಬಾಂಗ್ಲಾ ದೇಶದಲ್ಲಿ 7 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು.
ಈವರೆಗೆ ಬಾಂಗ್ಲಾದೇಶದಲ್ಲಿ 6,91,957 ಪ್ರಕರಣಗಳು ದಾಖಲಾಗಿದೆ. 9,822 ಮಂದಿ ಸಾವನ್ನಪ್ಪಿದ್ದಾರೆ.