ಪಾಕಿಸ್ತಾನ, ಎ.16 (DaijiworldNews/PY): "ಪಾಕ್ನಲ್ಲಿ ಉಂಟಾಗಿರುವ ಕಾನೂನು ವ್ಯವಸ್ಥೆ ಸಮಸ್ಯೆ ಹಿನ್ನೆಲೆ ಅಲ್ಲಿನ ಸರ್ಕಾರ ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಟಿಕ್ ಟಾಕ್, ಗೂಗಲ್, ಯೂಟ್ಯೂಬ್ ಆ್ಯಪ್ ಹಾಗೂ ಜಾಲತಾಣಗಳ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರಿದ್ದು, ಇವುಗಳಿಗೆ ಬೆಳಗ್ಗೆ 11 ಗಂಟೆಯಿಂದ ನಿಷೇಧ ಹೇರಲಾಗಿದ್ದು, ಮಧ್ಯಾಹ್ನ 3ರವರೆಗೆ ನಿಷೇಧ ಇರಲಿದೆ" ಎಂದು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ತಿಳಿಸಿದೆ.
"ಪಾಕಿಸ್ತಾನದ ಉಗ್ರ ಸಂಘಟನೆ ಟೆಹ್ರೀಕ್-ಇ-ಲಬ್ಬಾಯಿಕ್ಗೆ ಸೇರಿದ ಸದಸ್ಯರು ಹಾಗೂ ಬೆಂಬಲಿಗರು ತಮ್ಮ ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಬಂಧನವನ್ನು ವಿರೋಧಿಸಿ ಸೋಮವಾರದಿಂದ ದೇಶದಾದ್ಯಂತ ಹಿಂಸಾಚಾರ ನಡೆಸುತ್ತಿದ್ದಾರೆ. ಶುಕ್ರವಾರ ಪ್ರಾರ್ಥನೆಯ ಬಳಿಕ ಟಿಎಲ್ಪಿ ಸಂಘಟನೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎನ್ನುವ ಮಾಹಿತಿ ದೊರೆತಿದೆ. ಹಾಗಾಗಿ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಟಿಎಲ್ಪಿ ಸಂಘಟನೆಗೆ ಸಂಬಂಧಿಸಿದಂತ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡಬಾರದು" ಎಂದು ಅಲ್ಲಿನ ಎಲ್ಲಾ ಟಿವಿ ವಾಹಿನಿಗಳಿಗೆ ಸೂಚನೆ ನೀಡಲಾಗಿದೆ.
ಟೆಹ್ರೀಕ್-ಇ-ಲಬ್ಬಾಯಿಕ್ಗೆ ಸೇರಿದ ಸದಸ್ಯರು ಹಾಗೂ ಬೆಂಬಲಿಗರು ತಮ್ಮ ಮುಖ್ಯಸ್ಥನ ಬಂಧನದ ವಿರುದ್ದ ಎಪ್ರಿಲ್12ರಿಂದೀಚೆ ಪಾಕಿಸ್ತಾನದ ವಿವಿಧೆಡೆ ಹಿಂಸಾಚಾರ ಹಾಗೂ ಪ್ರತಿಭಟನೆ ನಡೆಸಿವೆ. ಈ ಸಂಬಂಧ ಅಲ್ಲಿನ ಪೊಲೀಸರು 115 ಎಫ್ಐಆರ್ ದಾಖಲಿಸಿದ್ದು, 2 ಸಾವಿರಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಟಿಎಲ್ಪಿ ನಡೆಸುವ ಹಿಂಸಾಚಾರಕ್ಕೆ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆಗೆ ನಂಟಿದೆ. ಪ್ರವಾದಿ ಮೊಹಮ್ಮದ್ ಅವರ ಅವಹೇಳನಕರಿ ಕಾರ್ಟೂನ್ ಪ್ರದರ್ಶಿಸಿದ ಫ್ರಾನ್ಸ್ನ ಶಿಕ್ಷಕರೋರ್ವರನ್ನು ಹತ್ಯೆ ಮಾಡಲಾಗಿತ್ತು. ಫ್ರಾನ್ಸ್ ಈ ಧೋರಣೆಗೆ ಪಾಕಿಸ್ತಾನ ಸೇರಿದಂತೆ ಕೆಲವು ಮುಸ್ಲಿಂ ದೇಶಗಳು ಟೀಕಿಸಿವೆ.
ಪಾಕಿಸ್ತಾನ ಸರ್ಕಾರ ಇದೀಗ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಟಿಎಲ್ಪಿ ದೊಡ್ಡಮಟ್ಟದಲ್ಲಿ ಚಳವಳಿ ನಡೆಸಲು ಮುಂದಾಗಿದೆ. ಈ ಚಳವಳಿಯನ್ನು ತಡೆಯುವ ಸಲುವಾಗಿ ಪಾಕ್ ಸರ್ಕಾರ ಎಪ್ರಿಲ್ 12ರಂದು ಟಿಎಲ್ಪಿ ಮುಖ್ಯಸ್ಥ ಸಾದ್ ರಿಜ್ವಿಯನ್ನು ಬಂಧಿಸಿತು. ತನ್ನ ಬೆಂಬಲಿಗರು ಬೀದಿಗೆ ಬಂದು ಹಿಂಸಾಚಾರ ನಡೆಸಿ ಉತ್ತರ ನೀಡಬೇಕು ಎಂದು ರಿಜ್ವಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆ ಪಾಕ್ನಲ್ಲಿ ಹಿಂಸಾಚಾರ ನಡೆಯುತ್ತಿದೆ.