ಇಸ್ಲಾಮಾಬಾದ್, ಏ. 17 (DaijiworldNews/HR): ಮರಣದಂಡನೆ ಶಿಕ್ಷೆಗೆ ಒಳಗಾದ ಕುಲಭೂಷಣ್ ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸುವಂತೆ ಪಾಕಿಸ್ತಾನ ಸರ್ಕಾರ ಭಾರತವನ್ನು ಮತ್ತೊಮ್ಮೆ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.
ವಿದೇಶಾಂಗ ಕಚೇರಿ ವಕ್ತಾರ ಝಿಯಾದ್ ಹಫೀಜ್ ಚೌಧರಿ ಅವರು ಮಾತನಾಡಿ, "ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಕೀಲರನ್ನು ನೇಮಕ ಮಾಡುವ ಮೂಲಕ ಪಾಕ್ ನ್ಯಾಯಾಲಯದೊಂದಿಗೆ ಸಹಕರಿಸುವಂತೆ ನಾವು ಮತ್ತೊಮ್ಮೆ ಭಾರತವನ್ನು ಒತ್ತಾಯಿಸುತ್ತಿದ್ದು, ಇದರಿಂದಾಗಿ ಐಸಿಜೆ ತೀರ್ಪಿನ ಪೂರ್ಣ ಪರಿಣಮಕಾರಿ ಜಾರಿ ಸಾಧ್ಯವಾಗಲಿದೆ" ಎಂದರು.
ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ 2017 ರ ಏಪ್ರಿಲ್ನಲ್ಲಿ ಗೂಡಚಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
ಇನ್ನು ಜಾಧವ್ಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಹಾಗೂ ಮರಣದಂಡನೆಯನ್ನು ಪ್ರಶ್ನಿಸಿದ್ದ ಭಾರತ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು.