ಕಾಬೂಲ್, ಏ.18 (DaijiworldNews/MB) : ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಮಸೀದಿಯಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡು ದಾಳಿ ನಡೆಸಿದ್ದು ಈ ದಾಳಿಯಿಂದಾಗಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಾಂತೀಯ ಗವರ್ನರ್ ಜಿಯಾಲ್ಹಾಕ್ ಅಮರ್ಖೈಲ್, ರಾಜಧಾನಿ ಜಲಾಲಾಬಾದ್ನ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಜಮೀನಿನ ವಿವಾದದ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಆದರೆ ಈವರೆಗೂ ಯಾರ ಬಂಧನವೂ ನಡೆದಿಲ್ಲ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಾದ್ಯಂತ ವಿವಾದಿತ ಭೂಮಿಯ ಬಗ್ಗೆ ಘರ್ಷಣೆಗಳು ಸಾಮಾನ್ಯವಾಗಿದೆ. ಕಳೆದ ಏಪ್ರಿಲ್ನಲ್ಲಿ ಅದೇ ಪ್ರಾಂತ್ಯದಲ್ಲಿ ವಿವಾದಿತ ಭೂಮಿಯ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ ಆರು ಬುಡಕಟ್ಟು ಜನಾಂಗದವರು ಸಾವನ್ನಪ್ಪಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದರು.