ವಾಷಿಂಗ್ಟನ್, ಏ.20 (DaijiworldNews/MB) : ಅಮೇರಿಕಾ ಒಂದು ದೇಶವಾಗಿ ಉಳಿಯಬೇಕಾದರೆ ಈ ಹಿಂದೆ ಕೆಲವು ಮುಸ್ಲಿಂ ರಾಷ್ಟ್ರಗಳ ಮೇಲೆ ಹೇರಿದ್ದ ಪ್ರಯಾಣ ನಿಷೇಧವನ್ನು ಮತ್ತೆ ಜಾರಿಗೊಳಿಸಬೇಕು ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ ಬಿಡೆನ್ಗೆ ಒತ್ತಾಯ ಮಾಡಿದ್ದಾರೆ.
ನಮ್ಮ ದೇಶದಿಂದ ಭಯೋತ್ಪಾದನೆ ಮತ್ತು ಉಗ್ರವಾದವನ್ನು ದೂರವಿಡಬೇಕಾದರೆ, ನಾವು ಕಠಿಣ ನಿಯಮಗಳನ್ನು ಜಾರಿಗೆ ತರುವುದು ಅನಿವಾರ್ಯವಾಗುತ್ತದೆ. ನಾನು ಅಧ್ಯಕ್ಷ ಆಗಿದ್ದ ಸಂದರ್ಭ ಕೆಲವು ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆಯಿಂದ ದೇಶವನ್ನು ರಕ್ಷಿಸಲು ಮುಸ್ಲಿಂ ರಾಷ್ಟ್ರಗಳ ಮೇಲೆ ಪ್ರಯಾಣ ನಿಷೇಧ ಹೇರಿದ್ದೆ ಎಂದು ಹೇಳಿದ್ದಾರೆ.
ನಾನು ನನ್ನ ಆಡಳಿತದ ವೇಳೆ ಜಾರಿಗೆ ತಂದ ನಿಯಮಗಳು ದೇಶದ ರಕ್ಷಣೆಗೆ ಅಗತ್ಯವಾದುದು. ಆದರೆ ಬಿಡೆನ್ ಆ ನಿಯಮವನ್ನು ಹಿಂಪಡೆದು ದೇಶ ಭಯೋತ್ಪಾದನಾ ದಾಳಿಯ ಆತಂಕಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ದೇಶದ ಒಳಿತಿಗಾಗಿ ಜಾರಿಗೆ ತಂದಿದ್ದ ಈ ನಿಯಮವನ್ನು ಜೋ ಬಿಡೆನ್ ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿರುವ ಟ್ರಂಪ್, ನಾನು ಯಶಸ್ವಿಯಾಗಿ ಜಾರಿಗೆ ತಂದ ನಿರಾಶ್ರಿತರ ನಿರ್ಬಂಧಗಳನ್ನೂ ಮತ್ತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ನಾವು ಕೂಡಾ ಯುರೋಪ್ ಮಾಡಿ ಅನೇಕ ವಲಸೆ ತಪ್ಪುಗಳನ್ನು ಮಾಡಿದರೆ ನಮ್ಮನ್ನು ಇತಿಹಾಸ ಕ್ಷಮಿಸಲಾರದು. ನನ್ನ ಆದೇಶವನ್ನು ಹಿಂಪಡೆದ ಬಿಡೆನ್ ಭಾರೀ ಬೆಲೆ ತೆರಲಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅಮೇರಿಕಾದ ಅಧ್ಯಕ್ಷರಾಗಿದ್ದ ಸಂದರ್ಭ ಸೊಮಾಲಿಯಾ, ಸುಡಾನ್, ಇರಾನ್, ಇರಾಕ್, ಯೆಮೆನ್, ಲಿಬಿಯಾ, ಸಿರಿಯಾ ಸೇರಿ ಹಲವು ಮುಸ್ಲಿಂ ರಾಷ್ಟ್ರಗಳ ಪ್ರಯಾಣಕ್ಕೆ ನಿಷೇಧ ಹೇರಿದ್ದರು. ಅದರೆ ಬಿಡೆನ್ ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಈ ಆದೇಶವನ್ನು ರದ್ದುಗೊಳಿಸಿದರು.