ವಾಷಿಂಗ್ಟನ್, ಎ.25 (DaijiworldNews/PY): ಹೆಚ್ಚುತ್ತಿರುವ ಕೊರೊನಾ ಪ್ರಕಣದಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ತನ್ನಲ್ಲಿರುವ ಹೆಚ್ಚುವರಿ ಲಸಿಕೆಯನ್ನು ನೀಡದಿರುವ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತದ ನಡೆಗೆ ಟೀಕೆ ವ್ಯಕ್ತವಾಗಿದೆ.
ಬಿಡೆನ್ ಆಡಳಿತದ ಈ ನಿಲುವಿಗೆ ಆಡಳಿತರೂಢ ಡೆಮಾಕ್ರಟಿಕ್ ಪಕ್ಷದ ಮುಖಂಡರೂ ಹಾಗೂ ವಿವಿಧ ಕ್ಷೇತ್ರದ ನಾಯಕರು ಅಸಮಾಧನ ವ್ಯಕ್ತಪಡಿಸಿದ್ದಾರೆ.
"ಭಾರತ ಹಾಗೂ ಇತರ ರಾಷ್ಟ್ರಗಳು ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿದೆ. ಈ ಹಿನ್ನೆಲೆ, ಅಸ್ಪ್ರಜೆನಿಕಾ ಕಂಪೆನಿಯ ಲಸಿಕೆ ನೀಡಬೇಕು" ಎಂದು ಭಾರತೀಯ ಅಮೇರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
"ಭಾರತ ಸೇರಿದಂತೆ ಇತರ ದೇಶಗಳಲ್ಲಿನ ಜನರು ಸಹಾಯಕ್ಕಾಗಿ ನಿರೀಕ್ಷಿಸುತ್ತಿದ್ದಾರೆ. ಅವರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೋದಾಮುಗಳಲ್ಲಿ ನಾವು ಲಸಿಕೆಯನ್ನು ಸಂಗ್ರಹಿಸುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಟ್ನ ತನ್ವಿ ಮದನ್ ಟ್ವೀಟ್ ಮಾಡಿದ್ದು, "ಜೋ ಬಿಡೆನ್ ಅಡಳಿತ ಕಳೆದ ಕೆಲವು ತಿಂಗಳಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿತ್ತು. ಆದರೆ ಇದೀಗ ಆ ಹೆಸರನ್ನು ಕಳೆದುಕೊಳ್ಳುತ್ತಿದೆ" ಎಂದಿದ್ದಾರೆ.
"ಕೊರೊನಾದಿಂದಾಗಿ ಭಾರತದಲ್ಲಿ ನನ್ನ ಕುಟುಂಬದ ಐದು ಮಂದಿ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ" ಎಂದು ಭಾರತೀಯ ಅಮೇರಿಕನ್ ಸೋನಾಲ್ ಶಾ ತಿಳಿಸಿದ್ದಾರೆ.