ಇಸ್ಲಾಮಾಬಾದ್, ಏ.25 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ. ಈ ನಿಟ್ಟಿನಲ್ಲಿ ಭಾರತದೊಂದಿಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಪಾಕಿಸ್ತಾನಿಗಳು ಭಾರತದ ಒಳಿತಿಗೆ ಪ್ರಾರ್ಥಿಸಿದ್ದಾರೆ. ಟ್ವಿಟರ್ನಲ್ಲಿ #PakistanstandswithIndia ಟ್ರೆಂಡ್ ಆಗಿದೆ.
ಶನಿವಾರ, ಮತ್ತೊಮ್ಮೆ, ಭಾರತದಲ್ಲಿ ಕೊರೊನಾ ಪ್ರಕರಣಗಳು 346,786 ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸತತ ಮೂರನೇ ದಿನವೂ ದೇಶದಲ್ಲಿನ ಕೊರೊನಾ ಪ್ರಕರಣವು ಹೊಸ ವಿಶ್ವ ದಾಖಲೆಯಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ ಆಸ್ಪತ್ರೆಗಳು ಆಮ್ಲಜನಕ ಪೂರೈಕೆಗಾಗಿ ಕೇಂದ್ರ, ರಾಜ್ಯದ ಮೊರೆ ಹೋಗುತ್ತಿದೆ.
ಭಾರತದ ಕೆಟ್ಟ ಪರಿಸ್ಥಿತಿಯನ್ನು ಗಮನಿಸಿದ ನೆರೆ ರಾಷ್ಟ್ರವಾದ ಪಾಕಿಸ್ತಾನದ ಹಲವು ಮಂದಿ ಭಾರತದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶುಕ್ರವಾರ, ಪಾಕಿಸ್ತಾನದ ಈಧೀ ಫೌಂಡೇಶನ್, ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ಬಿಕ್ಕಟ್ಟನ್ನು ನಿರ್ವಹಿಸಲು 50 ಆಂಬುಲೆನ್ಸ್ ಮತ್ತು ಸಿಬ್ಬಂದಿಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದೆ.
"ನೆರೆಯ ಸ್ನೇಹಿತರಾಗಿ, ನಾವು ನಿಮ್ಮ ಬಗ್ಗೆ ಬಹಳ ಸಹಾನುಭೂತಿ ಹೊಂದಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ 50 ಆಂಬುಲೆನ್ಸ್ಗಳನ್ನು ನೀಡುವ ಮೂಲಕ ನಾವು ನಮ್ಮಿಂದಾದ ಸಹಾಯ ಮಾಡಲು ಬಯಸುತ್ತೇವೆ ಎಂದು ಈಧೀ ಫೌಂಡೇಶನ್ನ ಅಧ್ಯಕ್ಷ ಫೈಸಲ್ ಈಧೀ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈಧೀ ಫೌಂಡೇಶನ್ ಮಾತ್ರವಲ್ಲದೆ ಪಾಕಿಸ್ತಾನದ ಸಚಿವರು ಸೇರಿದಂತೆ ಹಲವು ಪಾಕಿಸ್ತಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ಪರವಾಗಿ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಟ್ವಿಟರ್ನಲ್ಲಿ #PakistanstandswithIndia ಟ್ರೆಂಡ್ ಆಗಿದೆ.