ವಿಶ್ವಸಂಸ್ಥೆ, ಎ.28 (DaijiworldNews/PY): "ಕೊರೊನಾ ವಿರುದ್ದ ಹೋರಾಡುತ್ತಿರುವ ಭಾರತಕ್ಕೆ ಸಾಧ್ಯವಾದಷ್ಟು ಸಹಾಯ ಮಾಡಲು ವಿಶ್ವಸಂಸ್ಥೆ ಸಿದ್ದವಿದೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ಉಪವಕ್ತಾರ ಫರ್ಹಾನ್ ಹಕ್ ತಿಳಿಸಿದ್ದಾರೆ.
"ವಿಶ್ವಸಂಸ್ಥೆಯ ಅಧಿಕಾರಿಗಳು ಭಾರತದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ, ನ್ಯೂಯಾರ್ಕ್ ಹಾಗೂ ಭಾರತದಲ್ಲಿರುವ ಸಂಬಂಧಪಟ್ಟ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ್ದೇವೆ" ಎಂದು ಹೇಳಿದ್ದಾರೆ.
"ಭಾರತದಿಂದ ಇಲ್ಲಿಯವರೆಗೆ ನಿರ್ದಿಷ್ಟವಾದ ನೆರವಿಗಾಗಿ ಬೇಡಿಕೆ ಬಂದಿಲ್ಲ. ನಾವು ಯಾವುದೇ ಪರಿಹಾರ ಅಥವಾ ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟಂತ ಸಾಮಾಗ್ರಿಗಳನ್ನು ಭಾರತಕ್ಕೆ ರವಾನಿಸಿಲ್ಲ. ಆದರೆ, ಭಾರತದಿಂದ ಬೇಡಿಕೆ ಬಂದಲ್ಲಿ ನಾವು ತಕ್ಷಣವೇ ಸ್ಪಂದಿಸುತ್ತೇವೆ" ಎಂದಿದ್ದಾರೆ.
"ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರ ಜೊತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಹಿರಿಯ ಅಧಿಕಾರಿ ಮಾರಿಯಾ ಲೂಯಿಜಾ ರಿಬೈರೊ ವಿವೋಟ್ಟಿ ಅವರು ಮಾತುಕತೆ ನಡೆಸಿ, ಭಾರತದ ಕೊರೊನಾ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ" ಎಂದು ಹೇಳಿದ್ದಾರೆ.
"ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಸಿಬ್ಬಂದಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನಯ ನಾವೇ ವಹಿಸಿಕೊಂಡಿದ್ದೇವೆ. ಭಾರತ ಈಗಾಗಲೇ ಕೊರೊನಾ ಸಂಕಷ್ಟವನ್ನು ಎದುರಿಸುತ್ತಿದ್ದು, ಮತ್ತೆ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಒತ್ತಡ ಹೇರಬಾರದು ಎನ್ನುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.